ಸ್ಯಾಂಡಲ್ ವುಡ್ ನಲ್ಲಿ ಕ್ರಿಕೆಟ್ ಪಂದ್ಯ ಶುರು ಮಾಡಿದ ಕೀರ್ತಿ ಡಾ.ವಿಷ್ಣುವರ್ಧನ್ ಅವರಿಗೆ ಸಲ್ಲುತ್ತದೆ. ಸಿನಿಮಾ ತಂಡಗಳನ್ನು ಕಟ್ಟಿಕೊಂಡು ಸದಾ ಕ್ರಿಕೆಟ್ ಆಡುತ್ತಿದ್ದ ವಿಷ್ಣು ದಾದ ವೃತ್ತಿಪರ ಕ್ರಿಕೆಟ್ ಆಟಗಾರರ ಜೊತೆಯೂ ಪಂದ್ಯಾವಳಿಗಳನ್ನು ಆಡುತ್ತಿದ್ದರು. ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಅವರ ಅಭಿಮಾನಿಗಳು ಕೂಡ ‘ಯಜಮಾನ ಪ್ರೀಮಿಯರ್ ಲೀಗ್’ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದಾರೆ.
ಈ ಬಾರಿಯ ಕ್ರಿಕೆಯ ಪಂದ್ಯಾವಳಿಯು ಇದೇ ಜೂನ್ 24 ಹಾಗೂ 25 ರಂದು ಬಿಐಸಿಸಿ ಇನ್ಫಿನಿಟಿ ಔಟ್ ಡೋರ್ ಗ್ರೌಂಡ್ ಮಾಗಡಿ ರಸ್ತೆ, ಬೆಂಗಳೂರಿನಲ್ಲಿ ನಡೆಯಲಿದೆ. ಈ ಮಾಹಿತಿಯನ್ನು ಮೊನ್ನೆಯಷ್ಟೇ ಕಿಚ್ಚ ಸುದೀಪ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ‘ನಮ್ಮ ಉದ್ದೇಶಗಳು ಸರಿಯಾಗಿದ್ದರೆ, ಅವು ನಮ್ಮ ನಂತರವೂ ಜೀವಂತವಾಗಿರುತ್ತವೆ ಎಂಬುದಕ್ಕೆ ಉದಾಹರಣೆ ಈ ಯಜಮಾನ ಪ್ರೀಮಿಯರ್ ಲೀಗ್’ ಎಂದು ಬರೆದುಕೊಂಡಿದ್ದರು.
ಡಾ.ವಿಷ್ಣು ಸೇನಾ ಸಮಿತಿಯು ಹಮ್ಮಿಕೊಂಡಿರುವ ಎರಡನೇ ಸೀಸನ್ ಇದಾಗಿದ್ದು, ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ವಿಷ್ಣು ಸೇನಾನಿಗಳು ಪಂದ್ಯಗಳನ್ನು ಆಡಲಿದ್ದಾರೆ. ವಿಷ್ಣುವರ್ಧನ್ ಹೆಸರಿನಲ್ಲಿ ವೀರಕಪುತ್ರ ಶ್ರೀನಿವಾಸ್ ಅವರು ಹತ್ತಾರು ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಅದಕ್ಕೆ ಸೇರ್ಪಡೆ ಈ ಯಜಮಾನ ಕಪ್ ಆಗಿದೆ. ಜನಪರ ಕೆಲಸಗಳ ಜೊತೆಗೆ ಕ್ರೀಡಾ ಲೋಕಕ್ಕೂ ಉತ್ತೇಜನ ಕೊಡುವ ನಿಟ್ಟಿನಲ್ಲಿ ಈ ಪಂದ್ಯಾವಳಿ ಆಯೋಜನೆಗೊಂಡಿದೆ.
ಯಜಮಾನರ ಹೆಸರಿನಲ್ಲಿ ಕ್ರಿಕೆಟ್ ಆಡುವುದು ಎಲ್ಲರಿಗೂ ಸಂಭ್ರಮ ತರುವ ವಿಚಾರ. ಮೊದಲಿನಿಂದಲೂ ಯಜಮಾನರು ಕಲೆ, ಸಂಗೀತ, ಕ್ರಿಕೆಟ್ ಗೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಸ್ವತಃ ಅವರು ಕೂಡ ಕ್ರಿಕೆಟ್ ಆಡುತ್ತಿದ್ದರು. ಅವರ ನೆನಪಿನಲ್ಲಿ ನಾವೆಲ್ಲ ಕ್ರಿಕೆಟ್ ಆಡುತ್ತೇವೆ. ಇದಕ್ಕೆ ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಜೊತೆಯಾಗುತ್ತಿದ್ದಾರೆ. ಪ್ರತಿ ವರ್ಷವೂ ಇದನ್ನು ಆಯೋಜನೆ ಮಾಡುತ್ತೇವೆ ಎಂದು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.