ಖಾರ್ಟೌಮ್: ಕಳೆದ ಮೂರು ದಿನಗಳಿಂದ ಸೇನಾ ಪಡೆ ಹಾಗೂ ಅರೆ ಸೇನಾ ಪಡೆಗಳ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಸುಮಾರು 200 ಮಂದಿ ಮೃತಪಟ್ಟಿದ್ದು, 1,800 ಜನರು ಗಾಯಾಗೊಂಡಿರುವ ಕುರಿತು ವರದಿಯಾಗಿದೆ.
ಯುದ್ಧದಲ್ಲಿ ಆಸ್ಪತ್ರೆಗಳು ಹಾನಿಗೀಡಾಗಿದ್ದು, ವೈದ್ಯಕೀಯ ಸಾಮಗ್ರಿ ಹಾಗೂ ಆಹಾರ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿದೆ ಎಂದು ವರದಿಯಾಗಿದೆ.
2021ರಲ್ಲಿ ಕ್ಷಿಪ್ರ ಕ್ರಾಂತಿಯ ಮೂಲಕ ಅಧಿಕಾರವನ್ನು ವಶಪಡಿಸಿಕೊಂಡಿದ್ದ ಎರಡು ಸೇನಾ ಪಡೆಗಳ ಮುಖ್ಯಸ್ಥರ ನಡುವೆ ಅಧಿಕಾರಕ್ಕಾಗಿ ನಡೆಯುತ್ತಿದ್ದ ಹಗ್ಗಜಗ್ಗಾಟವು ಮಾರಣಾಂತಿಕ ಹಿಂಸಾಚಾರವಾಗಿ ಸ್ಫೋಟಗೊಂಡಿದ್ದು, ಸುಡಾನ್ ಸೇನಾ ಮುಖ್ಯಸ್ಥ ಮುಹಮ್ಮದ್ ಫತಾ ಅಲ್-ಬುರ್ಹಾನ್ ಹಾಗೂ ಶಕ್ತಿಶಾಲಿ ಅರೆ ಸೇನಾ ಪಡೆಯಾದ ಕ್ಷಿಪ್ರ ನೆರವು ಪಡೆಯ ಮುಖ್ಯಸ್ಥರಾದ ಅವರ ಸಹಾಯಕ ಸೇನಾಧಿಕಾರಿ ಮುಹಮ್ಮದ್ ಹಮ್ದನ್ ಡಾಂಗ್ಲೊ ನಡುವೆ ಹಣಾಹಣಿ ನಡೆಯುತ್ತಿದೆ.
ತೀವ್ರ ಅಸ್ಥಿರತೆ ಎದುರಿಸುತ್ತಿರುವ ಸುಡಾನ್ ದೇಶದ ರಾಜಧಾನಿಯಲ್ಲಿ ನಡೆಯುತ್ತಿರುವ ಕಾಳಗವು ಅಭೂತಪೂರ್ವವಾಗಿದ್ದು, ಕದನ ವಿರಾಮ ಘೋಷಿಸುವಂತೆ ಪ್ರಾದೇಶಿಕ ಹಾಗೂ ಜಾಗತಿಕ ರಾಯಭಾರ ಮಾತುಕತೆಗಳು ನಡೆಯುತ್ತಿದ್ದರೂ ಕಾಳಗವು ಮತ್ತಷ್ಟು ಸುದೀರ್ಘ ಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ದೇಶಾದ್ಯಂತ ಕಾಳಗ ಹಬ್ಬಿದ್ದು, ಇದರಿಂದ ಪ್ರಾದೇಶಿಕ ಪ್ರಕ್ಷುಬ್ಧತೆ ಉಂಟಾಗುವ ಸಾಧ್ಯತೆ ಇದೆ ಎಂಬ ಕಳವಳ ವ್ಯಕ್ತವಾಗಿದೆ.