ನವದೆಹಲಿ: ಮೂರು ವರ್ಷದ ಬಳಿಕ ವೆನೆಜುವಲಾದಿಂದ ಭಾರತ ಕಚ್ಚಾ ತೈಲವನ್ನು ಖರೀದಿಸಲು ಮುಂದಾಗಿದೆ. ವೆನೆಜುವೆಲಾ ಸೇರಿದಂತೆ ನಿರ್ಬಂಧ ಇಲ್ಲದ ಯಾವುದೇ ದೇಶದಿಂದ ತೈಲ ಆಮದು ಮಾಡಿಕೊಳ್ಳಲು ಭಾರತ ಸಿದ್ಧ ಎಂದು ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಭಾರತದ ಮೂರು ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಎಚ್ಪಿಸಿಎಲ್-ಮಿತ್ತಲ್ ಎನರ್ಜಿ ವೆನೆಜುವೆಲಾದ ತೈಲ ಖರೀದಿಸಿದ್ದು, ಇದು ಮುಂದಿನ ಎರಡು ತಿಂಗಳುಗಳಲ್ಲಿ ಭಾರತಕ್ಕೆ ಬರುವ ಸಾಧ್ಯತೆಯಿದೆ.
ಭಾರತದಲ್ಲಿ ನಿರ್ದಿಷ್ಟವಾಗಿ ಖಾಸಗಿ ವಲಯದ ರಿಫೈನರ್ಸ್ ಆರ್ಐಎಲ್ ಮತ್ತು ನಯಾರಾ ಎನರ್ಜಿ ವೆನೆಜುವೆಲಾದ ತೈಲವನ್ನು ಖರೀದಿಸುತ್ತಿದ್ದವು. ಆದರೆ ಅಮೆರಿಕ ಹೇರಿದ ನಿರ್ಬಂಧದ ಬಳಿಕ ಆಮದು ನಿಂತಿತ್ತು. ಭಾರತವು ಕೊನೆಯದಾಗಿ ವೆನೆಜುವೆಲಾದ ಕಚ್ಚಾ ತೈಲವನ್ನು ನವೆಂಬರ್ 2020 ರಲ್ಲಿ ಆಮದು ಮಾಡಿಕೊಂಡಿತ್ತು.
ಭಾರತದ ಅಧಿಕೃತ ವ್ಯಾಪಾರದ ಮಾಹಿತಿಯ ಪ್ರಕಾರ 2019 ರಲ್ಲಿ ವೆನೆಜುವೆಲಾ ಐದನೇ ಅತಿ ದೊಡ್ಡ ತೈಲ ಪೂರೈಸುವ ದೇಶವಾಗಿದ್ದು, ಭಾರತೀಯ ಸಂಸ್ಕರಣಾಗಾರಗಳಿಗೆ ಸುಮಾರು 16 ಮಿಲಿಯನ್ ಟನ್ ಕಚ್ಚಾ ತೈಲವನ್ನು ಒದಗಿಸುತ್ತದೆ. ವೆನೆಜುವೆಲಾದಿಂದ 2019 ರಲ್ಲಿ ಭಾರತ 5.70 ಬಿಲಿಯನ್ ಡಾಲರ್ ತೈಲವನ್ನು ಆಮದು ಮಾಡಿಕೊಂಡಿದೆ. ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯ ಒಪೆಕ್ (OPEC) ಸದಸ್ಯ ದೇಶವಾದ ವೆನೆಜುವೆಲಾವು ವಿಶ್ವದಲ್ಲೇ ಅತಿ ಹೆಚ್ಚು ತೈಲ ನಿಕ್ಷೇಪಗಳನ್ನು ಹೊಂದಿದೆ.
ಅತಿ ಹೆಚ್ಚು ಕಚ್ಚಾ ತೈಲ ಆಮದು ಮಾಡುವ ಮೂರನೇ ಅತಿ ದೊಡ್ಡ ದೇಶ ಭಾರತವಾಗಿದ್ದು, ಅಗತ್ಯತೆಯ 85% ಪ್ರತಿಶತವನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಎಲ್ಲಿ ಅಗ್ಗವಾಗಿ ಸಿಗುತ್ತದೋ ಅಲ್ಲಿಂದ ಭಾರತ ತೈಲ ಖರೀದಿಸುತ್ತದೆ ಎಂದು ಸಮರ್ಥಿಸಿಕೊಂಡಿದೆ. ಭಾರತವು ಅಕ್ಟೋಬರ್ನಲ್ಲಿ ರಷ್ಯಾದ ತೈಲಕ್ಕೆ ಪ್ರತಿ ಬ್ಯಾರೆಲ್ಗೆ 84.20 ಡಾಲರ್ ಸರಾಸರಿ ಬೆಲೆಯನ್ನು ಪಾವತಿಸಿದೆ. ಇದು ಜಿ7 ರಾಷ್ಟ್ರಗಳು ನಿಗದಿಪಡಿಸಿದ 60 ಡಾಲರ್ ಬೆಲೆಯ ಮಿತಿಗಿಂತಲೂ ಹೆಚ್ಚಾಗಿದೆ.