ಡೆಲ್ಲಿ: 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 67ನೇ ಪಂದ್ಯದಲ್ಲಿಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಆರಂಭವಾದ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಲಲಿತ್ ಯಾದವ್ ಹಾಗೂ ಚೇತನ್ ಸಕಾರಿಯಾ ತಂಡ ಕೂಡಿಕೊಂಡಿದ್ದಾರೆ.
ಎರಡು ಬಲಿಷ್ಠ ಸ್ಪಿನ್ ಪಡೆಗಳ ನಡುವೆ ಪೈಪೋಟಿ ಏರ್ಪಡುವ ನಿರೀಕ್ಷೆ ಇದ್ದು, ಡೆಲ್ಲಿಗೆ ಹೋಲಿಸಿದರೆ ಚೆನ್ನೈನ ಬ್ಯಾಟಿಂಗ್ ಸದೃಢವಾಗಿದೆ. ಈಗಾಗಲೇ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಯಾವುದೇ ಅಡೆತಡೆಗಳಿಲ್ಲದೆ ಗೆಲ್ಲಲು ಚೆನ್ನೈ ಸೂಪರ್ ಕಿಂಗ್ಸ್ ಎದುರು ನೋಡುತ್ತಿದೆ.
ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಒಟ್ಟು 28 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದೆ. 28 ಪಂದ್ಯಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 18 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 10 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.
ತಂಡಗಳು ಹೀಗಿವೆ ನೋಡಿ
ಚೆನ್ನೈ ಸೂಪರ್ ಕಿಂಗ್ಸ್: ಡೆವೊನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೋಯಿನ್ ಅಲಿ, ರವೀಂದ್ರ ಜಡೇಜಾ, ಎಂ ಎಸ್ ಧೋನಿ(ನಾಯಕ), ದೀಪಕ್ ಚಹರ್, ಮಹೀಶ್ ತೀಕ್ಷಣ, ಮಥೀಶ್ ಪತಿರನ, ತುಷಾರ್ ದೇಶಪಾಂಡೆ.
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್(ನಾಯಕ), ರಿಲೇ ರುಸ್ಸೌ, ಫಿಲ್ ಸಾಲ್ಟ್, ಅಕ್ಷರ್ ಪಟೇಲ್, ಅಮನ್ ಖಾನ್, ಲಲಿತ್ ಯಾದವ್ ಯಶ್ ಧುಳ್, ಕುಲ್ದೀಪ್ ಯಾದವ್, ಏನ್ರಿಚ್ ನೋಕಿಯ, ಚೇತನ್ ಸಕಾರಿಯಾ, ಖಲೀಲ್ ಅಹಮ್ಮದ್.
ಪಂದ್ಯ: ಮಧ್ಯಾಹ್ನ 3.30ರಿಂದ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಸಿನಿಮಾ