ಬೆಂಗಳೂರು: ಡೆಂಗ್ಯೂ (Dengue) ಟೆಸ್ಟಿಂಗ್ಗೆ ಹೆಚ್ಚಿನ ಬೆಲೆ ವಿಧಿಸುತ್ತಿದ್ದ ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಡಿವಾಣ ಹಾಕಿದ್ದಾರೆ. 600 ರೂ. ದರ ನಿಗದಿಪಡಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಡೆಂಗ್ಯೂ ಜ್ವರ ಜನಸಾಮಾನ್ಯರಿಗೆ ಹೊರೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಜ್ವರಕ್ಕೆ ಉಚಿತ ಚಿಕಿತ್ಸೆ ಲಭ್ಯವಿದೆ. ಆದರೆ ಖಾಸಗಿ ಆಸ್ಪತ್ರೆಗಳು ಮನಬಂದಂತೆ ಡೆಂಗ್ಯೂ ಟೆಸ್ಟಿಂಗ್ಗೆ ಬೆಲೆ ವಿಧಿಸದಂತೆ ಕ್ರಮ ಕೈಗೊಳ್ಳಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಸಚಿವರ ಸೂಚನೆ ಮೇರೆಗೆ ಖಾಸಗಿ ಆಸ್ಪತ್ರೆಗಳಿಗೆ ಅನ್ವಯವಾಗುವಂತೆ ಆದೇಶ ಹೊರಡಿಸಿರುವ ಆರೋಗ್ಯ ಇಲಾಖೆ, ಡೆಂಗ್ಯೂ ಟೆಸ್ಟಿಂಗ್ಗೆ ದರ ನಿಗದಿಪಡಿಸಿದೆ. ಎರಡು ರೀತಿಯ ಟೆಸ್ಟಿಂಗ್ಗಳಿಗೆ ಒಟ್ಟು 600 ರೂ. ದರ ನಿಗದಿ ಮಾಡಿ ಆದೇಶಿಸಿದೆ. NS1 ಹಾಗೂ Igm ಎರಡು ಟೆಸ್ಟಿಂಗ್ಗಳಿಗೆ ತಲಾ 300 ರೂ. ಗಳನ್ನ ನಿಗದಿಪಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಹಾಗೂ ಲ್ಯಾಬ್ ರೋಟರಿಗಳು ಡೆಂಗ್ಯೂ ಟೆಸ್ಟಿಂಗ್ ಮಾಡಲು 600 ರೂಪಾಯಿಗಿಂತ ಹೆಚ್ಚು ವಿಧಿಸುವಂತಿಲ್ಲ.