ಬೆಂಗಳೂರು:– ಮಹಾನಗರಗಳ ಪೈಕಿ ಬೆಂಗಳೂರು ನಗರ ಸೈಬರ್ ಅಪರಾಧಗಳಲ್ಲಿ ಮೊದಲ ಸ್ಥಾನದಲ್ಲಿದೆ.
ಸೈಬರ್ ಕ್ರೈಂ ಕುರಿತು ಜನರಲ್ಲಿ ಜಾಗೃತಿ ಮೂಡಿ ಪೊಲೀಸ್ ಠಾಣೆಗೆ ದೂರು ಕೊಡುವರ ಮತ್ತು ಕಳ್ಳರ ಪ್ರಮಾಣದಲ್ಲಿ ಹೆಚ್ಚಳದ ಪರಿಣಾಮ ಪ್ರಕರಣಗಳ ಸರಾಸರಿ ಏರಿಕೆಯಾಗಿದೆ ಎನ್ನಲಾಗಿದೆ. ದೇಶದಲ್ಲಿ 2021ರಲ್ಲಿ 52,974 ಸೈಬರ್ ಪ್ರಕರಣಗಳು ದಾಖಲಾಗಿದ್ದರೇ, 2022ರಲ್ಲಿ 65,893 ಕೇಸ್ ದಾಖಲಾಗಿವೆ. ಇದೇ ಅಲ್ಲದೆ ಆರ್ಥಿಕ ಅಪರಾಧ (ಶೇ.11), ಹಿರಿಯ ನಾಗರಿಕರ ವಿರುದ್ಧ ಅಪರಾಧ (ಶೇ.9), ಮಹಿಳೆಯರ ವಿರುದ್ಧ (ಶೇ.4) ಅಪರಾಧಗಳು ಸಹ ಹೆಚ್ಚಳವಾಗಿರುವ ಅಂಶ ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ಬೆಳಕಿಗೆ ಬಂದಿದೆ.
ಸೈಬರ್ ಕ್ರೈಂ ಅಡಿಯಲ್ಲಿ 65,893 ಪ್ರಕರಣಗಳು ದಾಖಲಾಗಿವೆ. ತೆಲಂಗಾಣದಲ್ಲಿ 2022ನೇ ಸಾಲಿನಲ್ಲಿ 15,297 ಕೇಸ್ಗಳು ದಾಖಲಾಗಿದ್ದು, ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 12,556 ಮತ್ತು ಉತ್ತರ ಪ್ರದೇಶದಲ್ಲಿ 10,117 ಪ್ರಕರಣಗಳು ದಾಖಲಾಗಿದ್ದು, 2 ಮತ್ತು 3ನೇ ಸ್ಥಾನದಲ್ಲಿವೆ. ಕರ್ನಾಟಕದಲ್ಲಿ ದಾಖಲಾಗಿರುವ 12,556 ಸೈಬರ್ ಕ್ರೈಂಗಳ ಪೈಕಿ 11,025 ವಂಚನೆ, 338 ಲೈಂಗಿಕ ಕಿರುಕುಳ, 379 ಸುಲಿಗೆ, 27 ತೇಜೋವಧೆ ಸಂಬಂಧ ಕೇಸ್ ದಾಖಲಾಗಿವೆ.
ಇನ್ನೂ ದೇಶದಲ್ಲಿ ಮಹಾನಗರಗಳ ಪೈಕಿ ಹೋಲಿಕೆ ಮಾಡಿದರೇ ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿವೆ. 2021ರಲ್ಲಿ 6,423 ಕೇಸ್ ದಾಖಲಾಗಿದ್ದರೇ 2022ರಲ್ಲಿ 9,940 ಪ್ರಕರಣ ದಾಖಲಾಗಿದ್ದು, ಮೊದಲ ಸ್ಥಾನದಲ್ಲಿದೆ. ಆನಂತರ ಮುಂಬೈ(4,724) ಮತ್ತು ಹೈದರಾಬಾದ್ (4,436) ಎರಡು ಮತ್ತು 3ನೇ ಸ್ಥಾನದಲ್ಲಿವೆ.