ಬೆಂಗಳೂರು: ಆಸ್ತಿ ತೆರಿಗೆಗೆ ಹೆಚ್ಚಿನ ಕಾಲಾವಕಾಶ ಹಾಗೂ ಅದರಲ್ಲಿರುವ ತೊಡಕುಗಳನ್ನು ನಿವಾರಣೆ ಮಾಡಲು ಅನೇಕ ಅರ್ಜಿಗಳು ಬಂದಿವೆ. ಹೀಗಾಗಿ ತೆರಿಗೆ ಪಾವತಿಗೆ ಕಾಲಾವಕಾಶ ಕಲ್ಪಿಸಿ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳ ಜತೆ ಚರ್ಚೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ ಅಹವಾಲು ತಂದಿರುವವರ ಪೈಕಿ ಅನೇಕರು ವಸತಿ ನಿವೇಶನಗಳಲ್ಲಿ ಮಾಣಿಜ್ಯ ಕಟ್ಟಡಗಳನ್ನು ಕಟ್ಟಿದ್ದಾರೆ. ಇದಕ್ಕೆ ತೆರಿಗೆ ಹಾಗೂ ದಂಡ ಹೆಚ್ಚಾಗಿದೆ ನಮಗೆ ಸಮಯಾವಕಾಶ ಬೇಕು ಎಂಬ ಮನವಿ ಸಲ್ಲಿಸುತ್ತಿದ್ದಾರೆ. ನಾಗರೀಕರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಅವರಿಗೆ ಮತ್ತಷ್ಟು ಸಮಯಾವಕಾಶ ನೀಡುತ್ತೇವೆ.
ಇನ್ನು ಸರಳ ವ್ಯವಸ್ಥೆ ಜಾರಿಗೆ ತರಲು ಅಗತ್ಯ ಕಾನೂನು ತಿದ್ದುಪಡಿ ಮಾಡುತ್ತೇವೆ. ನಾಗರೀಕರು ಕೂಡ ನಮಗೆ ಸಹಾಯ ಮಾಡಬೇಕು. ವಸತಿ ನಿವೇಶನಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಜನರು ಕೂಡ ತಮ್ಮ ಆಸ್ತಿಗೆ ತಕ್ಕಂತೆ ತೆರಿಗೆ ಪಾವತಿ ಮಾಡಿ ಸಹಕಾರ ನೀಡಬೇಕು. ಆಗ ನಾವು ಕೂಡ ಜನರಿಗೆ ಸಹಾಯ ಮಾಡಬಹುದು” ಎಂದು ತಿಳಿಸಿದರು.
ಜನರಿಗೆ ಎಷ್ಟು ದಿನ ಕಾಲಾವಕಾಶ ನೀಡುತ್ತೀರಿ ಎಂದು ಕೇಳಿದಾಗ, “ ಕೆಲವರಿಗೆ ಮೂರು ದಿನ, ಒಂದು ವಾರದಲ್ಲಿ ಪಾವತಿ ಮಾಡುವಂತೆ ನೊಟೀಸ್ ನೀಡಲಾಗಿದೆ. ಅಧಿಕಾರಿಗಳು ಕಾನೂನಿನ ಅಡಿಯಲ್ಲಿ ಕೆಲಸ ಮಾಡುತ್ತಿದ್ದರೂ ನಾವು ಹೋದ ಕಡೆಗಳಲ್ಲಿ ಜನರು ಈ ಬಗ್ಗೆ ತಮ್ಮ ನೋವು ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇವೆ” ಎಂದು ತಿಳಿಸಿದರು.