ದೇಶಾದ್ಯಂತ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ 10 ಸಾವಿರದ ಗಡಿ ದಾಟಿದೆ. ಆಗಸ್ಟ್ 25ರ ಬಳಿಕ ಇದೇ ಮೊದಲ ಬಾರಿಗೆ ದೇಶದಲ್ಲಿ ಒಂದೇ ದಿನ 10 ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣ ವರದಿಯಾಗಿದೆ. ದೈನಂದಿನ ಕೋವಿಡ್ ಪ್ರಕರಣ 5 ಸಾವಿರದ ಗಡಿ ದಾಟಿದ 7 ದಿನಗಳ ಅಂತರದಲ್ಲೇ ಈ ಸಂಖ್ಯೆ 10 ಸಾವಿರದ ಗಡಿ ದಾಟಿದೆ.
ಬುಧವಾರದವರೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 10,168 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 15 ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಕಳೆದ 7 ದಿನಗಳಲ್ಲಿ ದೇಶದಲ್ಲಿ 47 ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣಗಳು ವರದಿಯಾಗಿವೆ. 7 ದಿನಗಳ ಹಿಂದೆ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 26,300 ಇತ್ತು. ಕಳೆದ 7 ದಿನಗಳಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಶೇ. 80ರಷ್ಟು ಏರಿಕೆ ಕಂಡಿದೆ.
ಕಳೆದ 7 ದಿನಗಳ ಹಿಂದೆ 48 ಮಂದಿ ಕೋವಿಡ್ಗೆ ಬಲಿಯಾಗಿದ್ದರು. ಇದೀಗ ಈ ಸಂಖ್ಯೆ 85ಕ್ಕೆ ಏರಿಕೆ ಕಂಡಿದೆ ಎಂದು ಅಂಕಿ ಅಂಶಗಳು ಹೇಳಿವೆ. ಆದರೆ, ಕೋವಿಡ್ ಸೋಂಕು ಪ್ರಸರಣ ಆಗುತ್ತಿರುವ ಪ್ರಮಾಣವನ್ನು ಗಮನಿಸಿದರೆ ಅದೃಷ್ಟವಶಾತ್ ಸಾವಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಇದೆ.
ಇನ್ನು ಕೋವಿಡ್ ಪಾಸಿಟಿವಿಟಿ ದರ ಕೂಡಾ ಏರಿಕೆ ಕಂಡಿದೆ. 7 ದಿನಗಳ ಹಿಂದೆ ಕೋವಿಡ್ ಪಾಸಿಟಿವಿಟಿ ದರ ಶೇ. 3.22ರಷ್ಟು ಇತ್ತು. ಇದೀಗ ಈ ದರವು ಶೇ. 4.46ಕ್ಕೆ ಏರಿಕೆ ಕಂಡಿದೆ.
ರಾಜ್ಯವಾರು ಕೋವಿಡ್ ಅಂಕಿ ಅಂಶ
ರಾಜ್ಯವಾರು ಅಂಕಿ ಅಂಶ ಗಮನಿಸಿದರೆ ಕೇರಳದಲ್ಲಿ ಒಂದೇ ದಿನ ಅತಿ ಹೆಚ್ಚು ಪ್ರಕರಣ ದಾಖಲಾಗಿದೆ. ಜುಲೈ 13 ಗುರುವಾರದಂದು ಕೇರಳದಲ್ಲಿ 3,420 ಪ್ರಕರಣಗಳು ದಾಖಲಾಗಿವೆ. ಇದು ಕಳೆದ ಒಂದು ವರ್ಷದಲ್ಲೇ ಅತಿ ಹೆಚ್ಚು ಎಂದು ಅಂಕಿ ಅಂಶಗಳು ಹೇಳುತ್ತಿವೆ. ಇನ್ನು ದಿಲ್ಲಿಯಲ್ಲಿ 1,159, ಮಹಾರಾಷ್ಟ್ರದಲ್ಲಿ 1,115 ಪ್ರಕರಣಗಳು ದಾಖಲಾಗಿದ್ದು, ಹಲವು ತಿಂಗಳ ಬಳಿಕ ಈ ರಾಜ್ಯಗಳು 1 ಸಾವಿರಕ್ಕೂ ಹೆಚ್ಚು ಪ್ರಕರಣಗಳಿಗೆ ಸಾಕ್ಷಿಯಾಗಿವೆ.
ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕಳೆದ 7 ದಿನಗಳಲ್ಲಿ ಕೋವಿಡ್ ಸೋಂಕಿನ ಹರಡುವಿಕೆ ತೀವ್ರ ಸ್ವರೂಪದಲ್ಲಿ ಏರಿಕೆ ಕಂಡಿದೆ. ಛತ್ತೀಸ್ಗಡ, ಬಿಹಾರ, ಹರಿಯಾಣ, ತಮಿಳುನಾಡು, ಉತ್ತರ ಪ್ರದೇಶ ರಾಜ್ಯಗಳಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗಿದ್ದರೆ, ಗುಜರಾತ್ ಹಾಗೂ ಗೋವಾ ರಾಜ್ಯಗಳಲ್ಲಿ ಸೋಂಕಿನ ಆರ್ಭಟ ಕಡಿಮೆ ಇದೆ.