ನವದೆಹಲಿ: ಬೌದ್ಧ ಧರ್ಮದ ಸರ್ವೋಚ್ಛ ಧರ್ಮಗುರು ದಲೈ ಲಾಮಾ 8 ವರ್ಷದ ಅಮೇರಿಕನ್ ಮಂಗೋಲಿಯನ್ ಬಾಲಕನನ್ನು ಟಿಬೆಟಿಯನ್ ಬೌದ್ಧಧರ್ಮದ ಮೂರನೇ ಪ್ರಮುಖ ಆಧ್ಯಾತ್ಮಿಕ ನಾಯಕ ಎಂದು ಘೋಷಿಸಿದ್ದಾರೆ.
ಅಮೆರಿಕದಲ್ಲಿ ಜನಿಸಿದ ಮಂಗೋಲಿಯನ್ ಬಾಲಕನಿಗೆ ಟಿಬೆಟ್ ಧರ್ಮಗುರು ದಲೈ ಲಾಮಾ ಅವರು ಟಿಬೆಟಿಯನ್ ಬೌದ್ಧಧರ್ಮದಲ್ಲಿ ಮೂರನೇ ಅತ್ಯುನ್ನತ ಶ್ರೇಣಿಯ 10ನೇ ಲಾಮಾ ಎಂದು ಕರೆಯಲ್ಪಡುವ ಖಲ್ಖಾ ಜೆಟ್ಸನ್ ದಂಪಾ ರಿಂಪೋಚೆ ಅವರ ಹೆಸರಿಟ್ಟಿದ್ದಾರೆ ಎಂದು ಹೇಳಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಚಿತ್ರದಲ್ಲಿ ಗೋಚರವಾಗುವಂತೆ, ಕೆಂಪು ನಿಲುವಂಗಿ ಮತ್ತು ಮಾಸ್ಕ್ ಧರಿಸಿರುವ ಬಾಲಕ ದಲೈ ಲಾಮಾ ಅವರನ್ನು ಭೇಟಿಯಾಗಿರುವುದನ್ನು ತೋರಿಸಲಾಗಿದೆ. ಅಮೇರಿಕಾದಲ್ಲಿ ಜನಿಸಿದ ಎಂಟು ವರ್ಷದ ಮಗುವಿಗೆ ಅವಳಿ ಸಹೋದರನಿದ್ದಾನೆ ಮತ್ತು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಮಗ ಮತ್ತು ಮಂಗೋಲಿಯನ್ ಸಂಸತ್ತಿನ ಮಾಜಿ ಸದಸ್ಯನ ಮೊಮ್ಮಗ ಎಂದು ತಿಳಿದುಬಂದಿದೆ.
ಎಂಟು ವರ್ಷದ ಮಗುವನ್ನು ಟಿಬೆಟಿಯನ್ ಬೌದ್ಧಧರ್ಮದಲ್ಲಿ ಮೂರನೇ ಅತ್ಯುನ್ನತ ಲಾಮಾ ಎಂದು ಕರೆದಿರುವುದು ಚೀನಾವನ್ನು ಕೆರಳಿಸುವ ಸಾಧ್ಯತೆಯಿದೆ, ಅದು ತನ್ನದೇ ಆದ ಸರ್ಕಾರದಿಂದ ಆಯ್ಕೆಯಾದ ಬೌದ್ಧ ನಾಯಕರನ್ನು ಮಾತ್ರ ಅತ್ಯುನ್ನುತ ಲಾಮಾ ಎಂದು ಗುರುತಿಸಲಾಗುವುದು ಎಂದು ಪಟ್ಟು ಹಿಡಿಯುವ ಸಾಧ್ಯತೆಗಳಿವೆ.