ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ದಳಪತಿ ಪೆನ್ ಡ್ರೈವ್ ಬಾಂಬ್ ಹಾಕಿದ್ದಾರೆ.. ವರ್ಗಾವಣೆ ದಂಧೆ ಬಗ್ಗೆ ಸದನದಲ್ಲಿ ಗುಡುಗುತ್ತಿದ್ದ ಕುಮಾರಸ್ವಾಮಿ, ಇಂದು ಸಾಕ್ಷ್ಯ ಸಮೇತ ವಿಧಾನಸೌಧಕ್ಕೆ ಎಂಟ್ರಿ ಕೊಟ್ರು.. ಸಚಿವರೊಬ್ಬರು ವರ್ಗಾವಣೆಗೆ ಹಣ ಡಿಮ್ಯಾಂಡ್ ಮಾಡಿರೋ ಆಡಿಯೋ ಅದಾಗಿದ್ದು, ಸಿಎಂ, ಡಿಸಿಎಂನ್ನೂ ಬಿಡದೇ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ರು.
ಯೆಸ್… ಸಿದ್ದರಾಮಯ್ಯ ಸರ್ಕಾರದ ವಿರುದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಮರವನ್ನೇ ಸಾರಿದ್ದಾರೆ.. ಇಷ್ಟು ದಿನ ಮಾತಿನಲ್ಲಿ, ಟ್ವಿಟರ್ ನಲ್ಲಿ ವರ್ಗಾವಣೆ ದಂಧೆ ಬಗ್ಗೆ ಕುಮಾರಸ್ವಾಮಿ ಮಾತಾಡ್ತಿದ್ರು. ಈಗ ಸಾಕ್ಷ್ಯ ಬಿಡುಗಡೆಗೂ ಮುಂದಾಗಿದ್ದಾರೆ. ಇವತ್ತು ಸದನಕ್ಕೆ ಬರುವಾಗ ಪೆನ್ ಡ್ರೈವ್ ವೊಂದನ್ನ ಜೇಬಲ್ಲಿಟ್ಟುಕೊಂಡೇ ಬಂದಿದ್ರು. ಮಾಧ್ಯಮಗಳ ಮುಂದೆ ಬಂದು ವರ್ಗಾವಣೆ ದಂಧೆಯ ಪೆನ್ ಡ್ರೈವ್ ಪ್ರದರ್ಶನ ಮಾಡಿದ್ರು. ವರ್ಗಾವಣೆಗಾಗಿ ಸಚಿವರೊಬ್ಬರು ಹಣಕ್ಕೆ ಡಿಮ್ಯಾಂಡ್ ಮಾಡಿರೋ ಆಡಿಯೋ ಇದರಲ್ಲಿದೆ ಎಂದು ಬಾಂಬ್ ಹಾಕಿದ್ರು. ಹೆಚ್ ಡಿಕೆ ಹಾಕಿದ ಪೆನ್ ಡ್ರೈವ್ ಬಾಂಬ್ ಗೆ ಇಡೀ ಸರ್ಕಾರ ಬೆಚ್ವಿ ಬಿದ್ದಿದೆ. ಆ ಆಡಿಯೋ ಯಾರದ್ದು ಅಂತಾ ಹೆಚ್ ಡಿಕೆ ಹೇಳಲಿಲ್ಲ. ಸಮಯ ಬಂದಾಗ ಬಿಡುಗಡೆ ಮಾಡ್ತೀನಿ ಅಂತಷ್ಟೇ ಹೇಳಿ, ಪೆನ್ ಡ್ರೈವ್ ಜೇಬಲ್ಲಿಟ್ಟುಕೊಂಡ್ರು. ಸಾಕ್ಷ್ಯ ಇದ್ಯಾ ಅಂಥಾ ಕೇಳ್ತಿದ್ರು. ಎಲ್ಲಾ ರೆಡಿ ಮಾಡಿಟ್ಟುಕೊಂಡಿದ್ದೀನಿ ಅಂತಾ ಸಿಎಂ ಹಾಗೂ ಸಚಿವರ ವಿರುದ್ಧ ಕೆಂಡ ಕಾರಿದ್ರು..
ಡಿ.ಕೆ ಶಿವಕುಮಾರ್ ಹೆಸರೇಳದೇ ಕುಮಾರಸ್ವಾಮಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ರು. ನಮ್ಮಿಂದ ಬೆಳೆದವರು ನಮ್ಮ ಬಗ್ಗೆಯೇ ಮಾತಾಡ್ತಾರೆ. ಎರಡು ಮೂರು ಲಕ್ಷ ಖರ್ಚು ಮಾಡೋ ಯೋಗ್ಯತೆ ಇಲ್ವಾ ನಂಗೆ. ಯಾವುದೋ ಟೆಂಟ್ ನಲ್ಲಿ ಬ್ಲೂಫಿಲಂ ತೋರಿಸಿಕೊಂಡು ನಾನು ಬಂದಿಲ್ಲ. ರೌಡಿಗಳಿಗೆ ಬಾಟಲ್ ಸಪ್ಲೈ ಮಾಡಿಲ್ಲ ಎಂದು ಡಿಕೆ ಶಿವಕುಮಾರ್ ಹೆಸರೇಳದೇ ವಾಕ್ಸಮರ ನಡೆಸಿದ್ರು.
ಹೆಚ್ ಡಿ ಕುಮಾರಸ್ವಾಮಿ ಇಷ್ಟಕ್ಕೇ ನಿಲ್ಲಿಸಲಿಲ್ಲ. ಇಂಧನ ಇಲಾಖೆಯಲ್ಲಿ ನಿನ್ನೆ ಎರಡು ಟ್ರಾನ್ಸ್ ಫರ್ ಆಗಿದೆ. ಹತ್ತತ್ತ ಕೋಟಿಗೆ ವರ್ಗಾವಣೆ ಆಗಿದೆ. ಆ ಅಧಿಕಾರಿ ದಿನಕ್ಕೆ ಐವತ್ತು ಲಕ್ಷ ಕಮಿಷನ್ ಹೊಡೆಯುತ್ತಾನೆ ಎಂದು ಹೆಚ್ ಡಿಕೆ ಮತ್ತೊಂದು ಬಾಂಬ್ ಹಾಕಿದ್ರು. ಅಲ್ಲದೇ ನಗರಾಭಿವೃದ್ಧಿ ಇಲಾಖೆ ನಗದು ಇಲಾಖೆ ಆಗಿದೆ ಎಂದು ಸಚಿವ ಭೈರತಿ ಬಸವರಾಜ್ ವಿರುದ್ಧವೂ ಹರಿಹಾಯ್ದರು..
ಹೆಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ರು. ಅವ್ರು ಹತಾಶರಾಗಿ ಸುಳ್ಳು ಹೇಳ್ತಿದ್ದಾರೆ. ಅಸೆಂಬ್ಲಿಯಲ್ಲೇ ಉತ್ತರ ಕೊಡ್ತೀನಿ ಎಂದ್ರು..
ಕುಮಾರಸ್ವಾಮಿ ಅಷ್ಟೆಲ್ಲಾ ಬಾಂಬ್ ಹಾಕಿದ್ರೂ ಡಿ.ಕೆ ಶಿವಕುಮಾರ್ ಮಾತೇ ಆಡಿಲ್ಲ. ಅವ್ರು ರಾಜಕಾರಣ ಮಾಡ್ತಾರೋ.. ಬಾಂಬ್ ಹಾಕ್ತಾರೋ ಗೊತ್ತಿಲ್ಲ. ನಮ್ಮ ರಾಜಕಾರಣ ನಾವು ಮಾಡ್ತೇವೆ ಎಂದಷ್ಟೇ ಹೇಳಿದ್ರು..
ಇಂಧನ ಇಲಾಖೆಯಲ್ಲಿ ಹತ್ತತ್ತು ಕೋಟಿಗೆ ವರ್ಗಾವಣೆ ನಡೀತಿದೆ ಅನ್ನೋ ಆರೋಪಕ್ಕೆ ಸಚಿವ ಕೆ.ಜೆ ಜಾರ್ಜ್ ಗರಂ ಆದ್ರು. ಅದೇನ್ ದಾಖಲೆ ಇದ್ಯೋ ಹೋಗಿ ಸ್ಪೀಕರ್ ಗೆ ಕೊಡಲಿ. ಸುಮ್ಮನೆ ಹಿಟ್ ಅಂಡ್ ರನ್ ಮಾಡೋದು ಬೇಡ. ದಾಖಲೆಯೇ ಕೊಡದಿದ್ರೆ ತನಿಖೆ ಮಾಡಿಸೋದು ಹೇಗೆ ಅಂತಾ ತಿರುಗೇಟು ನೀಡಿದ್ರು.
ಒಟ್ನಲ್ಲಿ ಹೆಚ್ ಡಿಕೆ ಹಾಕಿದ ಪೆನ್ ಡ್ರೈವ್ ಬಾಂಬ್ ಗೆ ಇಡೀ ಸರ್ಕಾರ ನಡುಗಿ ಹೋಗಿದೆ. ಆ ಸಚಿವನ್ಯಾರು..? ಪೆನ್ ಡ್ರೈವ್ ನಲ್ಲಿ ಏನೇನಿದ್ಯೋ ಅಂತಾ ಎಲ್ಲಾ ತಲೆ ಕೆಡಿಸಿಕೊಂಡಿದ್ದಾರೆ. ಕುಮಾರಸ್ವಾಮಿಯವ್ರು ಆ ಸಾಕ್ಷ್ಯವನ್ನ ಸುಮ್ಮನೆ ಜೇಬಿನಲ್ಲಿಟ್ಟುಕೊಳ್ಳೋ ಬದಲು ಸದನದಲ್ಲಿ ಪ್ರದರ್ಶಿಸಲಿ ಅನ್ನೋ ಆಗ್ರಹವೂ ಕೇಳಿಬರ್ತಿದೆ. ಆದ್ರೆ ಹೆಚ್ ಡಿಕೆ ಮಾತ್ರ ಸಮಯ ಬಂದಾಗ ಬಿಡುಗಡೆ ಮಾಡ್ತೀನಿ ಎಂದು ಎಲ್ಲರ ನಿದ್ದೆಗೆಡಿಸಿದ್ದಾರೆ..