ಕೀವ್ : ದೇಶದ ದಕ್ಷಿಣ ಭಾಗದ ಕೆರ್ಸಾನ್ ಬಳಿ ಇರುವ ಅಣೆಕಟ್ಟು ಹಾಗೂ ಜಲವಿದ್ಯುತ್ ಉತ್ಪಾದನಾ ಕೇಂದ್ರವನ್ನು ರಷ್ಯಾ ಪಡೆಗಳು ಸ್ಫೋಟಿಸಿವೆ ಎಂದು ಉಕ್ರೇನ್ ಆರೋಪಿಸಿದೆ.
‘ಹಾನಿಗೊಳಗಾಗಿರುವ ಅಣೆಕಟ್ಟೆಯಿಂದ ಭಾರಿ ಪ್ರಮಾಣದ ನೀರು ಹೊರ ಬರುತ್ತಿದ್ದು ಇದರಿಂದ ಭಾರಿ ಪ್ರಮಾಣದಲ್ಲಿ ಪ್ರವಾಹ ಉಂಟಾಗುವ ಅಪಾಯ ಇದೆ ಎಂದು ಉಕ್ರೇನ್ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಅಣೆಕಟ್ಟೆಯ ಕೆಳಗಿನ ಪ್ರದೇಶದಲ್ಲಿರುವವರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎರಡೂ ದೇಶಗಳ ಅಧಿಕಾರಿಗಳು ಜನರಿಗೆ ಸೂಚನೆ ನೀಡಿದ್ದಾರೆ. ಈ ಅಣೆಕಟ್ಟು ಹಾಗೂ ವಿದ್ಯುತ್ ಉತ್ಪದನಾ ಕೇಂದ್ರವಿರುವ ಪ್ರದೇಶವು ಸದ್ಯ ರಷ್ಯಾ ನಿಯಂತ್ರಣದಲ್ಲಿದೆ.
ಉಕ್ರೇನ್ನ ಆರೋಪವನ್ನು ರಷ್ಯಾ ಅಧಿಕಾರಿಗಳು ತಳ್ಳಿ ಹಾಕಿದ್ದು, ‘ಉಕ್ರೇನ್ ಸೇನಾಪಡೆಗಳು ನಡೆಸಿದ ದಾಳಿಯಲ್ಲಿ ಡಿನಿಪ್ರೊ ನದಿಗೆ ನಿರ್ಮಿಸಿರುವ ಕಖೋವ್ಕಾ ಅಣೆಕಟ್ಟು ಹಾನಿಗೊಳಲಾಗಿದೆ’ ಎಂದಿದ್ದಾರೆ.
ಅಪಾರ ಪ್ರಮಾಣದ ನೀರು ಹರಿದು ಹೋಗುವ ಕಾರಣ, ರಷ್ಯಾ ವಶದಲ್ಲಿರುವ ಕ್ರಿಮಿಯಾದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಅತಂಕ ನಿರ್ಮಾಣವಾಗಿದೆ. ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಕುಸಿಯುವ ಕಾರಣ, ಅಣುವಿದ್ಯುತ್ ಸ್ಥಾವರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿ ಸಮಸ್ಯೆ ಉಂಟಾಗಬಹುದು ಎಂದು ಹೇಳಲಾಗುತ್ತಿದೆ.