ಎಲ್ಲದಕ್ಕೂ ಒಂದು ಟೈಮ್ ಬಂದೇಬರುತ್ತೆ..! ನಟ ದರ್ಶನ್ ವಿಚಾರದಲ್ಲೂ ಇದು ನಿಜವಾಗಿದೆ. ಮಾಧ್ಯಮದವರಿಗೆ ಅವಾಚ್ಯಶಬ್ಧಗಳಿಂದ ನಿಂದಿಸಿ ನಂತರ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳೊ ಮಾತೇ ಇಲ್ಲ ಅಂತ ಕಡ್ಡಿ ಮುರಿದಂತೆ ಶಪಥ ಮಾಡಿದ್ದ ಚಾಲೆಂಜಿಂಗ್ಸ್ಟಾರ್ ಈದೀಗ ತಾವೇ ಹಾಕಿಕೊಂಡ ಚಾಲೆಂಜನ್ನ ಮರೆತುಬಿಟ್ಟಿದ್ದಾರೆ. ಪತ್ರಕರ್ತರಿಗೆ ಸಾರಿ ಕೇಳಿ ಕೈ ಮುಗಿದುಬಿಟ್ಟಿದ್ದಾರೆ..! ಸುದ್ಧಿಸಂಪಾದಕರನ್ನ ಕರೆದು ಧಾವಂತದ ಸಂಧಾನ ಸಭೆ ನಡೆಸಿದ್ದಾರೆ.
‘ದರ್ಶನ್’ ಎಂಬ ಹೆಸರು ಕನ್ನಡ ಚಿತ್ರರಂಗದ ಪುಟಗಳ ಒಂದು ಮಿಂಚಿನ ಶಕ್ತಿ. ಕರ್ನಾಟಕದಲ್ಲಿ ದರ್ಶನ್ ಫ್ಯಾನ್ ಫಾಲೊವಿಂಗ್ ಬೃಹತ್ ಸಾಗರದಂತೆ. ದರ್ಶನ್ ಏನೇ ಮಾಡಿದ್ರೂ ಡಿ ಬಳಗ ಎಂದಿಗೂ ಬಿಟ್ಟುಕೊಟ್ಟಿಲ್ಲ. ದರ್ಶನ್ ಹೆಸರಿಗೆ ಯಾವುದೇ ವಿವಾದ ತಳುಕಿ ಹಾಕಿಕೊಂಡ್ರು ಫ್ಯಾನ್ಸ್ ಮಾತ್ರ ದರ್ಶನ್ ನಮ್ ಹೀರೊ, ನಮ್ ಆರಾಧ್ಯದೈವ ಅಂತ ಒಪ್ಪಿಕೊಳ್ಳುತ್ತಲೇ, ಕ್ಷಮಿಸುತ್ತಲೇ ಬಂದಿದ್ದಾರೆ. ಹಾಗೆಯೇ ದರ್ಶನ್ ಕೂಡ ತಮ್ಮ ಅಭಿಮಾನಿಗಳನ್ನ ಸೆಲೆಬ್ರೆಟಿಗಳು ಅಂತ ಸಂಭೋದಿಸುತ್ತಾರೆ. ದರ್ಶನ್ ಸಿನಿಮಾಗಳು ಸೋಲಲಿ, ಗೆಲ್ಲಲಿ ದರ್ಶನ್ ಫ್ಯಾನ್ಸ್ ಆ ಸಿನಿಮಾ ಗಲ್ಲಾಪೆಟ್ಟಿಗೆ ತುಂಬಿಕೊಳ್ಳುವಂತೆ ಕಾಪಾಡಿಕೊಂಡಿದ್ದಾರೆ. ಬಾಕ್ಸ್ ಆಫೀಸ್ ಸುಲ್ತಾನ್ ಹೆಸರನ್ನ ಉಳಿಸಿದ್ದಾರೆ. ದರ್ಶನ್ ಅಭಿನಯಿಸಿದ ಯಾವ ಸಿನಿಮಾವನ್ನೂ ಪ್ರೇಕ್ಷಕರು ಕೈ ಬಿಟ್ಟಿಲ್ಲ. ಆದರೂ ಎರಡು ವರ್ಷಗಳ ಹಿಂದೆ ನಡೆಯಬಾರದ್ದು ನಡೆದುಹೋಯ್ತು, ಘಟಿಸಬಾರದ್ದು ಘಟಿಸಿಹೋಯ್ತು. ಒಂದು ಘಟನೆ, ದರ್ಶನ್ ಇಂತಹ ಕೀಳುಮಟ್ಟದ ವ್ಯಕ್ತಿತ್ವದವರ ಎಂಬ ಪ್ರಶ್ನೆಯನ್ನ ಮಾಧ್ಯಮದವರು ಹಾಗೂ ಸಿನಿಮಾ ಪತ್ರಕರ್ತರನ್ನ ಚುಚ್ಚಿಬಿಟ್ಟಿತ್ತು. ದರ್ಶನ್ ಮಾಧ್ಯಮದವರನ್ನ ಆ ಕೆಟ್ಟ ಪದದಲ್ಲಿ ಬೈದಿದ್ದು, ಖುದ್ದು ದರ್ಶನ್ ವಲಯದಲ್ಲಿ ಹೊಸ ಬೆಂಕಿ ಹಾಕಿಬಿಡ್ತು.
ದರ್ಶನ್ ಹಾಗೇ ಮಾತಾಡೋರೆ ಅಲ್ಲ, ಯಾವುದೋ ಸಮಯಸಂದರ್ಭ ಹೀಗೆ ದರ್ಶನ್ ರಿಯಾಕ್ಟ್ ಮಾಡಿರಬಹುದು ಎಂಬ ಅಭಿಪ್ರಾಯ ದರ್ಶನ್ ಅಭಿಮಾನಿಗಳಿಂದ ಕೇಳಿಬಂತು. ಏನೇ ಆಗಲಿ, ದರ್ಶನ್ರನ್ನ ಬಹಳ ಹತ್ತಿರದಿಂದ ಬಲ್ಲ, ದರ್ಶನ್ ಸಿನಿಜರ್ನಿಯಲ್ಲಿ ಜೊತೆಗಿದ್ದ, ಸಿನಿಮಾ ಬಿಡುಗಡೆಯ ಸಮಯದಲ್ಲಿ ದರ್ಶನ್ ಸಿನಿಮಾಗಳ ಬಗ್ಗೆ ಪಿನ್ ಟು ಪಿನ್ ಸುದ್ಧಿ ಮಾಡೋ ಮಾಧ್ಯಮಗಳಿಗೆ ದರ್ಶನ್ ಮಾತುಗಳನ್ನ ಅರಗಿಸಿಕೊಳ್ಳೊಕೆ ಸಾಧ್ಯವಾಗಲಿಲ್ಲ. ಹಾಗಾಗಿಯೇ ದರ್ಶನ್ ಆಡಿಯೋಕ್ಲಿಪ್ ಬಗ್ಗೆ ಒಂದು ಸ್ಪಷ್ಟನೆ ಕೊಡೋವರೆಗೂ ದರ್ಶನ್ ಬಗ್ಗೆ ನ್ಯೂಸ್ ಮಾಡೋದು ಬೇಡ ಅಂತ ಮಾಧ್ಯಮಗಳು ಒಗ್ಗಟ್ಟಿನಿಂದ ಅಘೋಷಿತ ಬ್ಯಾನ್ ಹಾಕಿಬಿಟ್ವು. ನಟ ದರ್ಶನ್ ಕೂಡ ಇದರ ಬಗ್ಗೆ ಆಗ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ನನ್ನ ಅಭಿಮಾನಿಗಳು ನನ್ನ ಕೈ ಬಿಡಲ್ಲ ಅಂತ ಸುಮ್ಮನಾಗಿಬಿಟ್ರು. ಚಿತ್ರೋದ್ಯಮದ ಕೆಲವು ಹಿರಿತಲೆಗಳು, ಇಂಡಸ್ಟ್ರಿ ಬಲ್ಲವರು ದರ್ಶನ್ಗೆ ಮಾಧ್ಯಮಗಳ ಎದುರು ಕ್ಷಮೆ ಕೇಳಿಬಿಡಿ ಎಂದಗಲೂ ದರ್ಶನ್ ತಮ್ಮ ‘ಚಾಲೆಂಜ್’ ಬಿಟ್ಟಿರಲಿಲ್ಲ. ಆದರೆ ಈಗ ವರಮಹಾಲಕ್ಷ್ಮೀಹಬ್ಬದ ಶುಭದಿನದಂದೇ ದರ್ಶನ್ ಮಾಧ್ಯಮಗಳಿಗೆ ತಲೆ ಬಾಗಿದ್ದಾರೆ. ಫೇಸ್ಬುಕ್ನಲ್ಲಿ ಒಂದು ಪತ್ರ ಬರೆದು ಪತ್ರಕರ್ತರಿಗೆ ಸಾರಿ ಕೇಳಿಬಿಟ್ಟಿದ್ದಾರೆ.
ಈ ದರ್ಶನ್ ಕ್ಷಮಾಪತ್ರದೊಳಗೊಂದು ಹೊಸ ಟ್ವಿಸ್ಟ್ ಇದೆ. ಈ ಪತ್ರ ಬರೆಯೋಕು ಮುನ್ನ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ನೇತೃತ್ವದಲ್ಲಿ ಕೆಲವೇ ಸುದ್ಧಿಸಂಪಾದಕರೊಂದಿಗೆ ಆತುರದ ಸಂಧಾನ ಸಭೆ ಏರ್ಪಾಡು ಮಾಡಲಾಯ್ತು. ಹಿಂದೆ ನಡೆದಿದ್ದೇನು, ಮುಂದೆ ನಡೆಯಬೇಕಿರೋದು ಏನು ಎಂಬೆಲ್ಲ ಚರ್ಚೆಗಳು ನಡೆದಿವೆ. ದರ್ಶನ್ ಕೂಡ ಅಲ್ಲಿದ್ದ ಪತ್ರಕರ್ತರಿಗೆ ಕ್ಷಮೆಯಾಚಿಸಿದ್ದಾರೆ. ಕನ್ನಡದಲ್ಲಿ ಎಷ್ಟು ಚಾನೆಲ್ಗಳಿವೆ ಎಂಬ ಪ್ರಾಥಮಿಕ ಮಾಹಿತಿ ದರ್ಶನ್ಗಾಗಲಿ ಅಥವಾ ಸಂಧಾನಸಭೆಯ ರೂವಾರಿಗಳಾಗಿದ್ದ ರಾಕ್ಲೈನ್ ವೆಂಕಟೇಶ್ಗೆ ಬಹುಷಃ ಇರಲಿಲ್ಲವೆಂಬ ಅನುಮಾನವೂ ಇದೆ. ಚಾನೆಲ್ಗಳ ಸುದ್ಧಿ ಸಂಪಾದಕರ ಆಜ್ಞೆಯ ಮೇರೆಗೆ ದರ್ಶನ್ ಮತ್ತು ದರ್ಶನ್ ಸಿನಿಮಾ ಸುದ್ಧಿಗಳನ್ನ ಕವರ್ ಮಾಡದ ಸಿನಿಮಾ ವರದಿಗಾರರಿಗೂ ಈ ಬಗ್ಗೆ ಯಾವುದೇ ಸಿಗ್ನಲ್ ಸಿಕ್ಕಿರಲಿಲ್ಲ. ಸಿಕ್ಕಿದ್ರೂ ಎಲ್ಲರ ಬಳಿ ಹಂಚಿಕೊಳ್ಳುವಂತಿರಲಿಲ್ಲ. ದರ್ಶನ್ ತಮ್ಮ ಫೇಸ್ಬುಕ್ನಲ್ಲಿ ಕ್ಷಮೆ ಪೋಸ್ಟ್ ಮಾಡಿದಾಗಲೇ ಸಿನಿಮಾ ಬ್ಯುರೋಗಳಿಗೂ ಈ ಸಂಧಾನಸಭೆಯ ವಿಷಯ ಅರಿವಿಗೆ ಬಂದಿದೆ. ಇನ್ಮುಂದೆ ಎಲ್ಲವೂ ಸರಿ ಹೋಯ್ತಾ..? ನಾವು ದರ್ಶನ್ ಸಿನಿಮಾಸುದ್ಧಿಗಳನ್ನ ಮಾಡಬೇಕಾ..? ಸಂಸ್ಥೆಯ ನಿರ್ಧಾರಕ್ಕೆ ವೈಟ್ ಮಾಡಬೇಕಾ..? ಮುಂದೆಯೂ ದರ್ಶನ್ ತಮ್ಮ ದರ್ಪ ತೋರಿಸಿದ್ರೆ ಮತ್ತೆ ಸುದ್ಧಿ ಸ್ಟಾಪ್ ಮಾಡಬೇಕಾ ಎಂಬ ತೂಗುಕತ್ತಿಯ ಕೆಳಗೆ ಚಿತ್ರೋದ್ಯಮದ ಪ್ರಮುಖಭಾಗವಾಗಿರೋ ಸಿನಿಮಾ ಪತ್ರಿಕೋದ್ಯಮ ಸಿಕ್ಕಿಹಾಕಿಕೊಂಡಿದೆ.
ದರ್ಶನ್ ಅಭಿನಯದ ‘ಕ್ರಾಂತಿ’ ಫ್ಲಾಪ್ ಆಗಿ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿಬಿಡ್ತು. ದೊಡ್ಡ ಬಜೆಟ್ ವರ್ಕ್ ಆಗಲಿಲ್ಲ. ದರ್ಶನ್, ಅಭಿಮಾನಿಗಳ ಮೇಲೆ ಡಿಪೆಂಡ್ ಆಗಿದ್ರೂ ಸಿನಿಮಾ ಯಾಕೋ ಕೈ ಹಿಡಿಯಲಿಲ್ಲ. ಬದಲಾದ ಸಿನಿಮಾ ರೇಸಿನಲ್ಲಿ ದರ್ಶನ್ ಮತ್ತೊಂದು ಸೋಲು ಕಾಣುವಂತಾಯ್ತು. ಕ್ರಾಂತಿ ಸಿನಿಮಾದ ಸೋಲೇ ದರ್ಶನ್ರನ್ನ ಈಗ ಕ್ಷಮೆ ಕೇಳುವಂತೆ ಮಾಡ್ತಿದೆ ಎಂಬ ಒಳಸತ್ಯ ಸಿನಿಮಾ ಇಂಡಸ್ಟ್ರಿ ಹಾಗೂ ಪತ್ರಿಕೋದ್ಯಮದ ಘಟನುಘಟಿಗಳಿಗೆ ಗೊತ್ತಿದೆ. ದರ್ಶನ್ ಜೋಗಿಪ್ರೇಮ್ ಜೊತೆ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಇತ್ತ ರಾಕ್ಲೈನ್ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಶೂಟಿಂಗ್ ನಡೆಯುತ್ತಿದೆ. ಯಾಕೆ ಸುಮ್ಮನೇ ರಿಸ್ಕ್ ಅಂತ ದರ್ಶನ್ ಕಾಟಚಾರದ ಕ್ಷಮೆ ಕೇಳಿರೋದು, ನೀರಿನಲ್ಲಿ ಉಪ್ಪು ಹಾಕಿದ್ರೆ ಹೇಗೆ ಕರಗುತ್ತೋ ಅಷ್ಟೇ ಕ್ಲಿಯಾರಾಗಿದೆ.
ಮೇ ತಿಂಗಳ ಕರ್ನಾಟಕ ವಿಧಾನಸಭೆ ಎಲೆಕ್ಷನ್ ಸಮಯದಲ್ಲೂ ದರ್ಶನ್ ಮಾಧ್ಯಮದವರಿಗೆ Sorry ಕೇಳಿದ್ದಾರೆ ಎಂಬ ನಕಲಿ ಪತ್ರವೊಂದು ಹರಿದಾಡ್ತು. ಇದರ ಬಗ್ಗೆಯೂ ದರ್ಶನ್ ಏನನ್ನೂ ಹೇಳಿರಲಿಲ್ಲ. ದರ್ಶನ್ ಯಾವುದಾದರೂ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಿದ್ರೆ ಅದನ್ನ ಚಾನೆಲ್ಗಳು ಕ್ಯಾರಿ ಮಾಡ್ತಿರಲಿಲ್ಲ. ಈದೀಗ ದರ್ಶನ್ ಧಿಡೀರ್ ಅಂತ ಕ್ಷಮೆಯಾಚಿಸಿದ್ದು, ದರ್ಶನ್ಗೆ ಸಿನಿಮಾ ಪ್ರಮೋಷನ್ ಆಗುವುದು ಅನಿವಾರ್ಯ ಅಂತ ಗೊತ್ತಾಗುತ್ತೆ. ಹೆಸರಾಂತ,ಜನಪ್ರಿಯ ಸುದ್ಧಿಸಂಪಾದಕರ ಜೊತೆಗೊಂದು ಫೋಟೊ ತೆಗೆಸಿ ಅದನ್ನ ಫೇಸ್ಬುಕ್ಗೆ ಹಾಕಿರೋ ಉದ್ದೇಶವೂ ಅರ್ಥವಾಗುತ್ತೆ.
ದರ್ಶನ್ ‘ಈಗ ಕ್ಷಮೆ ಕೇಳೊದ್ರಲ್ಲಿ ತಪ್ಪಿಲ್ಲ’ ಎನ್ನುತ್ತಿದ್ದಾರೆ. ಯಾವುದೋ ‘ವಿಷಮ ಘಳಿಗೆಯ’ನ್ನ ನೆನಪಿಸ್ತಿದಾರೆ. ದರ್ಶನ್ ಆಡಿದ ಮಾತಿಗೆ ನಡೆದುಕೊಳ್ಳೊರು. ಆದರೆ ಅಂದು ಕ್ಷಮೆ ಕೇಳಲ್ಲ ಅಂತ ಹೇಳಿ ಈಗ ನಿರ್ಧಾರ ಬದಲಾಯಿಸಿರೋದು ದರ್ಶನ್ ಅಭಿಮಾನಿಗಳಿಗೂ ಬೇಸರ ತರಿಸಿದೆ. ಬಾಸ್, ನೀವು ಕ್ಷಮೆ ಕೇಳಬಾರದಿತ್ತು ಎಂಬ ಸಾಲುಸಾಲು ಕಾಮೆಂಟ್ಸ್ ಕಾಣಿಸ್ತಿದೆ. ದರ್ಶನ್ರವರಿಗೆ ಎಂದೂ ಮಾಧ್ಯಮಗಳು ಕೆಟ್ಟದ್ದು ಬಯಸಿಲ್ಲ, ಬಯಸೋದು ಇಲ್ಲ. ವಿಲನ್ ಪುತ್ರನೊಬ್ಬ ತನ್ನ ಸ್ವಯಂಪ್ರಯತ್ನದಿಂದಲೇ ಸ್ಟಾರ್ ಆಗಿ ಮೆರೆದಿದ್ದು, ಕನ್ನಡ ಸಿನಿಮಾವನ್ನ ಮನಸ್ಸಿನಿಂದ ಪ್ರೀತಿಸೋರ ಪ್ರತಿಯೊಬ್ಬ ಮನಸ್ಸಿನಲ್ಲಿದೆ. ದರ್ಶನ್ ಆಡಿಯೋಕ್ಲಿಪ್ ಸಹಜವಾಗಿಯೇ ಪತ್ರಕರ್ತರಿಗೆ ನೋವುಂಟು ಮಾಡಿದ್ದು ಸತ್ಯ. ಬರ್ತಡೇ ಆಗಲಿ, ಸುದ್ಧಿಗೋಷ್ಟಿಯಾಗಲಿ, ಸಿನಿಮಾ ರಿಲೀಸ್ ಆಗಲಿ ಪತ್ರಕರ್ತರು ದರ್ಶನ್ಗೆ ಅವಕಾಶ ಬಂದಗಲೆಲ್ಲ ಒಳ್ಳೆ ಮಣೆಯನ್ನೇ ಹಾಕಿದ್ದಾರೆ (ಕ್ರಾಂತಿ ಸಿನಿಮಾ ಬಿಟ್ಟು). ‘ಸರ್ದಾರ್’ ಸಿನಿಮಾದ ಯಾವುದೋ ಒಂದು ಕೆಟ್ಟ ಬಾಯ್ಕಾಟ್ ಘಟನೆಯನ್ನ ನೆನಪಿಸಿಕೊಂಡು, ಈಗೀನ ಪತ್ರಕರ್ತರು ಬರೀ TRP ಐಟಂಗಳು, ಭಾವನೆಗಳಿಲ್ಲದವರು ಎಂಬ ಡೈರೆಕ್ಟ್ ಜಡ್ಜ್ ಮೆಂಟನ್ನ ಇನ್ನಾದ್ರೂ ಶ್ರೀಯುತ ದರ್ಶನ್ರವರು ಬಿಡಬೇಕಾಗಿದೆ. ಎಲ್ಲವೂ ಸರಿಹೋಗಲಿ, ಬೇರೆ ನೆಲಗಳಲ್ಲೂ ಗುರುತಿಸಿಕೊಳ್ತಿರೋ ಕನ್ನಡ ಚಿತ್ರರಂಗಕ್ಕೆ ದರ್ಶನ್ ಚಿತ್ರಗಳು ದಾರಿ ಮಾಡಿಕೊಡಲಿ ಎಂಬ ಕಾಳಜಿಯಷ್ಟೇ ಪ್ರಸ್ತುತ..!
-ಫಿಲಂ ಡೆಸ್ಕ್. ಪ್ರಜಾಟಿವಿ