ರೇಣುಕಾ ಸ್ವಾಮಿಯನ್ನು ಕೊಲೆ ಕೇಸ್ ನಲ್ಲಿ ದರ್ಶನ್ ಎಂಡ್ ಗ್ಯಾಂಗ್ ಸದಸ್ಯರು ಅರೆಸ್ಟ್ ಆಗಿದ್ದಾರೆ. ಇಂದು ದರ್ಶನ್ ಹಾಗೂ ಉಳಿದ 17 ಮಂದಿಯ ನ್ಯಾಯಾಂಗ ಬಂಧನ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಮತ್ತೆ ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತಿದೆ. ಈ ವೇಳೆ ಅವರುಗಳ ನ್ಯಾಯಾಂಗ ಬಂಧನದ ಅವಧಿ ಮತ್ತೆ ವಿಸ್ತರಣೆ ಆಗೋ ಸಾಧ್ಯತೆ ಹೆಚ್ಚಾಗಿಯೇ ಇದೆ.
ನಟಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಾರೆ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣಿಕಾಸ್ವಾಮಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಇತರರು ಜೂನ್ 11ರಂದು ಬಂಧನಕ್ಕೆ ಒಳಗಾದರು. ಬಂಧನದ ಬಳಿಕ ಒಂದೊಂದೇ ಸತ್ಯ ಹೊರ ಬರುತ್ತಿದೆ. ಇನ್ನೂ ಚಾರ್ಜ್ಶೀಟ್ ಸಲ್ಲಿಕೆ ಮಾಡಿಲ್ಲ. ಇದೇ ಕಾರಣ ಇಟ್ಟುಕೊಂಡು ದರ್ಶನ್ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಗೆ ಕೋರಲು ನಿರ್ಧರಿಸಲಾಗಿದೆ. ಆರೋಪಿಗಳನ್ನು ಜಡ್ಜ್ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲು ನಿರ್ಧರಿಸಲಾಗಿದೆ.
ನಟ ದರ್ಶನ್ ಅವರು ಪ್ರಭಾವಿ ವ್ಯಕ್ತಿ. ಅವರಿಗೆ ಜಾಮೀನು ಸಿಕ್ಕರೆ ಹೊರ ಬಂದು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಪೊಲೀಸರು ಕೋರ್ಟ್ ಎದುರು ಆತಂಕ ಹೊರಹಾಕಲಿದ್ದಾರೆ. ಇದರ ಜೊತೆಗೆ ಅವರು ವಿದೇಶಕ್ಕೆ ತೆರಳುವ ಭಯವೂ ಇದೆ ಎಂದು ಪೊಲೀಸರು ಹೇಳಿದ್ದಾರೆ. ಹೀಗಾಗಿ ದರ್ಶನ್ ಬಿಡುಗಡೆ ಸದ್ಯಕ್ಕಿಲ್ಲ ಎನ್ನಲಾಗುತ್ತಿದೆ.
ಇದರ ನಡುವೆ ಮನೆ ಊಟ ಕಲ್ಪಿಸುವಂತೆ ಕೋರಿ ರಿಟ್ ಅರ್ಜಿಯೂ ಇಂದು ವಿಚಾರಣೆ ನಡೆಯಲಿದೆ. ನಟ ದರ್ಶನ್ ಅರ್ಜಿಗೆ ಜೈಲು ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಲಿದ್ದಾರೆ. ಪ್ರಕರಣದ ತನಿಖಾಧಿಕಾರಿಗಳಿಂದಲೂ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ. ಮಧ್ಯಾಹ್ನದ ಬಳಿಕ ನಟ ದರ್ಶನ್ ರಿಟ್ ಅರ್ಜಿ ವಿಚಾರಣೆ ನಡೆಯಲಿದೆ. ಇಂದು ದರ್ಶನ್ ಭವಿಷ್ಯಾ ಏನಾಗಲಿದೆ ಎಂಬ ಕುತೂಹಲ ಪ್ರತಿಯೊಬ್ಬರಿಗೂ ಶುರುವಾಗಿದೆ.