ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಅಲ್ಲೂ ಬಿಂದಾಸ್ ಆಗಿದ್ದಾರೆ. ರೌಡಿ ಶೀಟರ್ ಗಳ ಜೊತೆ ಸೇರಿಕೊಂಡು ಕಾಫಿ ಕುಡಿಯುತ್ತ ಸಿಗರೇಟ್ ಸೇದುತಾ ಆರಾಮಾಗಿದ್ದಾರೆ. ಜೊತೆಗೆ ಹೊರಗಿರುವ ರೌಡಿಗಳ ಜೊತೆಗೂ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಈ ಬೆಳವಣಿಗೆ ಮೃತ ರೇಣುಕಾಸ್ವಾಮಿ ಕುಟುಂಬದ ನೋವನ್ನು ಮತ್ತಷ್ಟು ಹೆಚ್ಚಿಸಿದ್ದು ಹೆತ್ತವರು ಕಣ್ಣೀರಿಟ್ಟಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಜೈಲು ಸೇರಿ 2 ತಿಂಗಳು ಕಳೆದುಹೋಗಿದೆ. ಇನ್ನೇನು ಎರಡ್ಮೂರು ವಾರಗಳಲ್ಲಿ ಡಿಗ್ಯಾಂಗ್ ವಿರುದ್ಧ ತನಿಖಾಧಿಕಾರಿಗಳು ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಈ ಹೊತ್ತಲ್ಲಿ ದರ್ಶನ್ ಜೈಲೊಳಗೆ ಮೋಜು ಮಸ್ತಿ ಮಾಡ್ತಿದ್ದಾರೆ ಎನ್ನಲಾದ ಶಾಕಿಂಗ್ ಫೋಟೋ ವೈರಲ್ ಆಗಿದೆ. ಸಿಗರೇಟ್ ಸೇದುತ್ತಾ, ಕಾಫಿ ಕುಡ್ಕೊಂಡು, ಇಬ್ಬರು ರೌಡಿ ಶೀಟರ್ಗಳ ಜೊತೆ ಕೂತು ಮಾತನಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳು ದೊಡ್ಡ ಸಂಚಲನ ಸೃಷ್ಟಿಸಿದೆ. ಅಲ್ಲದೆ, ಜೈಲೊಳಗೆ ದರ್ಶನ್ಗೆ ರಾಜಾತಿಥ್ಯ ಸಿಗ್ತಿದೆಯಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಮತ್ತೊಂದು ಕಡೆ ಮಗನನ್ನು ಕಳ್ಕೊಂಡು ರೇಣುಕಾಸ್ವಾಮಿ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ದರ್ಶನ್ ಮೋಜು ಮಸ್ತಿ ಫೋಟೋ ನೋಡಿ ರೇಣುಕಾಸ್ವಾಮಿ ಹೆತ್ತರವರಲ್ಲಿ ಆಕ್ರೋಶ ಶುರುವಾಗಿದೆ. ಅಲ್ಲದೆ ಮಗನ ಕೊಲೆ ಕೇಸ್ನ್ನು ಸಿಬಿಐಗೆ ಕೊಡಿ ಎಂದು ರೇಣುಕಾಸ್ವಾಮಿ ತಂದೆ
ಮನವಿ ಮಾಡಿದ್ದಾರೆ. ದರ್ಶನ್ ಕೇಸ್ನಲ್ಲಿ ಪೊಲೀಸರು ನಡೆದುಕೊಂಡಿರೋ ಮತ್ತು ನಡೆದುಕೊಳ್ತಿರೋ ರೀತಿಗೆ ಎಲ್ಲರು ಶಹಬ್ಬಾಶ್ ಎನ್ನುತ್ತಿದ್ದಾರೆ. ಆದ್ರೆ, ಜೈಲೊಳಗೆ ಮಾತ್ರ ದರ್ಶನ್ರನ್ನು ಸೆಲೆಬ್ರಿಟಿ ರೀತಿಯೇ ಟ್ರೀಟ್ ಮಾಡಲಾಗ್ತಿದ್ಯಾ ಎಂಬ ಪ್ರಶ್ನೆ ಹುಟ್ಟುವಂತಾ ಫೋಟೋ ವೈರಲ್ ಆಗಿದ್ದು ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಜೈಲೊಳಗೆ ದರ್ಶನ್ ಬಿಂದಾಸ್ ಜಿಂದಗಿ ನಡೆಸ್ತಿರೋ ಅನುಮಾನ ಹುಟ್ಟಿಸುವಂತಾ ಫೋಟೋ ನೋಡಿ ಆಘಾತಕ್ಕೆ ಒಳಗಾಗಿದ್ದರೂ, ಮನದೊಳಗೆ ಆಕ್ರೋಶದ ಜ್ವಾಲೆ ಹೊತ್ತಿ ಉರಿಯುತ್ತಿದ್ದರೂ ಕೂಡ.. ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ, ನಮ್ಮ ಪೊಲೀಸರ ಮೇಲೆ ನಂಬಿಕೆ ಕಡಿಮೆಯಾಗಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ. ರಾಜ್ಯ ಸರ್ಕಾರ, ರಾಜ್ಯ ಪೊಲೀಸರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನ್ಯಾಯ ಕೊಡಿಸೋ ಭರವಸೆ ಇದೆ ಎಂಬ ಮಾತನ್ನಾಡಿದ್ದಾರೆ. ಅಷ್ಟೇ ಅಲ್ಲ. ಜೈಲಿನಲ್ಲಿ ದರ್ಶನ್ಗೆ ಇಂಥಾ ರಾಜಾತಿಥ್ಯ ನೀಡುತ್ತಿರೋದು ಸತ್ಯವೇ ಆಗಿದ್ದಾದ್ರೆ.. ಅದಕ್ಕೆ ಕಾರಣರಾದವರಿಗೆ ತನಿಖೆ ಮಾಡಿ ಶಿಕ್ಷೆ ನೀಡಲಿ ಅಂತಾ ಮೃತ ರೇಣುಕಾಸ್ವಾಮಿ ಚಿಕ್ಕಪ್ಪ ಆಗ್ರಹಿಸಿದ್ದಾರೆ.
ಸದ್ಯ ವೈರಲ್ ಆಗಿರೋ ಫೋಟೋ ಹಾಗೂ ವಿಡಿಯೋಗೆ ಸಂಬಂಧಪಟ್ಟಂತೆ ಕಾರಾಗೃಹ ಇಲಾಖೆ ಹಿರಿಯ ಅಧಿಕಾರಿಗಳು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸೂಚವೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜೈಲಿನಲ್ಲಿ ಮೊಬೈಲ್ ಸಿಕ್ಕಿದ್ದು ಹೇಗೆ? ಫೋಟೋ ತೆಗೆದಿದ್ದು ಯಾರು? ದರ್ಶನ್ಗೆ ಸಿಗರೇಟ್ ಕೊಟ್ಟವರು ಯಾರು? ರೌಡಿಶೀಟರ್ಗಳ ಜೊತೆ ದರ್ಶನ್ ಅಷ್ಟು ಆಪ್ತವಾಗಿ, ಹರಟೆ ಹೊಡೆಯುತ್ತಾ ಮಾತನಾಡೋದಕ್ಕೆ ಅವಕಾಶ ಕೊಟ್ಟವರು ಯಾರು? ಎಂಬ ಪ್ರಶ್ನೆ ಶುರುವಾಗಿದೆ.