ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿಯಾಗಿರುವ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಕಂಬಿ ಹಿಂದೆ ಕಾಲ ಕಳೆಯುತ್ತಿರುವ ದರ್ಶನ್ ಅವರಿಗೆ ಜೈಲೂಟಕ್ಕೆ ಅಡ್ಜೆಸ್ಟ್ ಆಗದೆ ಮನೆಯೂಟಕ್ಕೆ ಭೇಡಿಕೆ ಇಟ್ಟಿದ್ದರು. ಆದ್ರೆ ಇದರಲ್ಲೂ ದರ್ಶನ್ ಗೆ ನಿರಾಸೆಯಾಗಿದೆ.
ದರ್ಶನ್ ಪರ ವಕೀಲರು ಹೈಕೋರ್ಟ್ನಲ್ಲಿ ಮನೆ ಊಟ, ಹಾಸಿಗೆ, ಪುಸ್ತಕ ನೀಡುವಂತೆ ಮನವಿ ಮಾಡಿದ್ದಾರೆ. ಇಂದು ಈ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಆರಂಭಿಸಿದೆ. ನ್ಯಾಯಾಮೂರ್ತಿ ಎಸ್.ಆರ್ ಕೃಷ್ಣಕುಮಾರ್ ಅವರ ನ್ಯಾಯಪೀಠದ ವಿಚಾರಣೆ ನಡೆದಿದ್ದು, ದರ್ಶನ್ ಪರ ಹಿರಿಯ ವಕೀಲರಾದ ಕೆ.ಎನ್ ಫಣೀಂದ್ರ ಹಾಗೂ ಸರ್ಕಾರದ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಹಾಜರಿದ್ದರು.
ದರ್ಶನ್ ಮನೆ ಊಟದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಅರ್ಜಿಯಲ್ಲಿ ಕಾನೂನಿನ ಅವಕಾಶಗಳ ಮೊದಲು ನೋಡೋಣ. ಅದು ಅಪ್ಲೈ ಆಗುತ್ತಾ ಇಲ್ವಾ ನೋಡೋಣ ಎಂದಿದೆ. ಇದೇ ವೇಳೆ ಎರಡು ಕಡೆಯ ವರದಿ ಸ್ವೀಕಾರ ಮಾಡಲಾಗಿದ್ದು, ನಾಳೆ ಮಧ್ಯಾಹ್ನ 2:30ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಲಾಗಿದೆ.
ದರ್ಶನ್ ಪರ ವಕೀಲರು ಮತ್ತು ಸರ್ಕಾರದ ಆಕ್ಷೇಪವಿರುವ ಎರಡು ಕಡೆಯ ಲಿಖಿತ ಪ್ರಾವಿಷನ್ ವರದಿಯನ್ನು ಕೋರ್ಟ್ ಸ್ವೀಕಾರ ಮಾಡಿದೆ. ಈ ವರದಿಯನ್ನು ಅಧ್ಯಯನ ಮಾಡಿ ನಾಳೆ ತೀರ್ಮಾನ ಮಾಡುವ ಸಾಧ್ಯತೆ ಇದೆ. ಇಂದು ದರ್ಶನ್ ಪರ ವಕೀಲರು ಮನೆ ಊಟಕ್ಕೆ ಅನುಮತಿ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಹೈಕೋರ್ಟ್ ನಾಳೆ ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿದ್ದು, ಸದ್ಯ ದರ್ಶನ್ ಅವರಿಗೆ ಇಂದು ಜೈಲೂಟವೇ ಗತಿಯಾಗಿದೆ.