ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್ ರನ್ನು ಇಂದು ಬೆಳ್ಳಂ ಬೆಳಗ್ಗೆಯೇ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದ್ದು ದರ್ಶನ್ ರನ್ನು ನೋಡಲು ರಸ್ತೆಗಳಲ್ಲಿ ಜನ ಸಾಲು ಗಟ್ಟಿ ನಿಂತಿದ್ದರು.
ಬಳ್ಳಾರಿ ಜೈಲಿಗೆ ಆಗಮಿಸಿರುವ ದರ್ಶನ್ ರನ್ನು ಮೊದಲು ಆಂತರಿಕ ಭದ್ರತಾ ವಿಭಾಗದಲ್ಲಿ ತಪಾಸಣೆ ಮಾಡಲಾಗುವುದು. ವೈದ್ಯರಿಂದ ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಯಲಿದೆ. ಬಳಿಕ ಬಳ್ಳಾರಿ ಜೈಲಿನ ಹೈಸೆಕ್ಯೂರಿಟಿ ಸೆಲ್ಗೆ ಕರೆದೊಯ್ಯಲಾಗುವುದು. ಹೈ ಸೆಕ್ಯೂರಿಟಿ ಸೆಲ್ನಲ್ಲಿ ದರ್ಶನ್ ರನ್ನು ಇಡಲು ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ. ಯಾರೊಬ್ಬರೂ ಎಂಟ್ರಿಯಾಗದಂತೆ ಹೈಸೆಕ್ಯೂರಿಟಿ ಸೆಲ್ ನಿರ್ಮಾಣ ಮಾಡಲಾಗಿದೆ ಎನ್ನಲಾಗುತ್ತಿದೆ.
ಮೂರು ದಶಕಗಳ ಹಿಂದೆ ಹೈ ಸೆಕ್ಯೂರಿಟಿ ಸೆಲ್ಗಳನ್ನು ನಿರ್ಮಾಣ ಮಾಡಲಾಗಿದೆ. ಎರಡು ಬದಿಯಲ್ಲಿ ಕನಿಷ್ಟ 30 ಸೆಲ್ಗಳಿವೆ. ಒಂದು ಕಡೆ 15 ಸೆಲ್ಗಳಿದ್ದು ಅಲ್ಲಿ ದರ್ಶನ್ ಅವರನ್ನು ಇರಿಸಲಾಗುತ್ತದೆ. ಪಂಜಾಬ್ ಸಿಎಂ ಹತ್ಯೆ ಮಾಡಿದ ಉಗ್ರಗಾಮಿಗಳನ್ನು ಬಂಧಿಸಿಡಲು ಸಿದ್ದಪಡಿಸಿದ್ದ ಸೆಲ್ನಲ್ಲಿ ದರ್ಶನ್ ಅವರನ್ನು ಬಂಧಿಸಿಡಲಾಗುತ್ತದೆ. ಈಗಾಗಲೇ ವಿವಿಧ ಆರೋಪ ಮತ್ತು ಅಪರಾಧಗಳ ಅಡಿ ಬಂಧಿತ 11 ಜನರನ್ನು ಈ ಸೆಲ್ಗಳಲ್ಲಿ ಇಡಲಾಗಿದೆ. ಮಂಗಳೂರು, ಶಿವಮೊಗ್ಗ, ಬೆಂಗಳೂರಿನ 11 ಜನರು ಈ ಸೆಲ್ಗಳಲ್ಲಿ ಇದ್ದಾರೆ.
ಬಳ್ಳಾರಿ ಕೇಂದ್ರ ಕಾರಾಗೃಹದ ಒಳಗಡೆ ಯೋಗ ಕೇಂದ್ರ ಇದೆ. ಆದರೆ ಹೈ-ಸೆಕ್ಯೂರಿಟಿ ಸೆಲ್ನಲ್ಲಿ ಇಲ್ಲ. ಕೇಂದ್ರ ಕಾರಾಗೃಹ ಹಾಗೂ ಈ ಹೈ- ಸೆಕ್ಯೂರಿಟಿ ಸೆಲ್ಗೆ ಸಂಪರ್ಕ ಇಲ್ಲ. ಜೈಲ್ ಸಿಬ್ಬಂದಿಗೂ ಸೆಲ್ನಲ್ಲಿ ಮೊಬೈಲ್ ಬಳಕೆ ನಿಷಿದ್ಧ. ಏನಿದ್ದರೂ ವೈಯರ್ ಲೆಸ್ ವ್ಯವಸ್ಥೆ ಮಾತ್ರ ಇದೆ. ಪರಪ್ಪನ ಅಗ್ರಹಾರ ಜೈಲಿನಲ್ಲಾದ ಘಟನೆ ಹಿನ್ನೆಲೆಯಲ್ಲಿ ಜೈಲ್ ಅಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ. ಸಿಬ್ಬಂದಿ ಮೊಬೈಲ್ ಬಳಕೆ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ಆರೋಪಿ ನಟ, ದರ್ಶನ್ ಅವರನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ಕರೆತರುವ ಹಿನ್ನೆಲೆಯಲ್ಲಿ ಡಿಸಿ ಪ್ರಶಾಂತ್ ಕುಮಾರ್ ಮಿಶ್ರ ಮತ್ತು ಡಾ.ಶೋಭಾರಾಣಿ ಆಗಮಿಸಿದ್ದಾರೆ. ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾತಸಂದ್ರ ಟೋಲ್ ದಾಟಿ, ಶಿರಾ ಮೂಲಕ ಬೆಂಗಳೂರು ಪೊಲೀಸರ ಬೆಂಗಾವಲಿನಲ್ಲಿ ನಟ ದರ್ಶನ್ ಅವರನ್ನು ಶಿಫ್ಟ್ ಮಾಡಲಾಗಿದೆ. ನಟ ದರ್ಶನ್ ಅವರನ್ನು ನೋಡಲು ಕ್ಯಾತಸಂದ್ರ ಮಾರ್ಗದಲ್ಲಿ ಅಭಿಮಾನಿಗಳು ನೆರೆದಿದ್ದರು. ಬೊಲೆರೋ ವಾಹನದಲ್ಲಿ ನಟ ದರ್ಶನ್ನನ್ನು ಕರೆತರಲಾಗಿದೆ.
ಪರಪ್ಪನ ಅಗ್ರಹಾರದಲ್ಲಿದ್ದ ಆರೋಪಿ ದರ್ಶನ್ ಅವರಿಗೆ ರಾಜಾತಿಥ್ಯ ಸಿಗುತ್ತಿದೆ ಎನ್ನುವ ಫೋಟೋ ವೈರಲ್ ಆದ ಬೆನ್ನಲ್ಲೇ ಆರೋಪಿಗಳನ್ನು ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲು ಬೆಂಗಳೂರು ನಗರದ 24ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿತ್ತು. ನ್ಯಾಯಾಲಯದ ಆದೇಶದಂತೆ ಆರೋಪಿ ನಟ ದರ್ಶನ್ ಅವರನ್ನು ಬಳ್ಳಾರಿಯ ಜೈಲ್ಗೆ ಶಿಫ್ಟ್ ಮಾಡಲಾಗಿದೆ.