ಚಾಲೆಂಜಿಂಗ್ ಸ್ಟಾರ್, ಬಾಕ್ಸಾಫೀಸ್ ಸುಲ್ತಾನ, ಡಿಬಾಸ್..ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ದರ್ಶನ್ ತೂಗುದೀಪ್ ಕ್ರೇಜ್ ಕಡಿಮೆಯಾಗಿದೆಯಾ? ಅಥವಾ ಕಾಟೇರಾ ಸಿನಿಮಾ ಸೋಲಿನ ಭೀತಿ ಕಾಡ್ತಿದೆಯಾ? ಅಥವಾ ಮುಂದಿನ ಸಿನಿಮಾಗಳಿಗೆ ಪ್ರಚಾರ ಬೇಕೇಬೇಕು ಎಂಬ ಅರಿವು ಆಗಿದೆಯಾ? ಗೊತ್ತಿಲ್ಲ. ಮಾಧ್ಯಮಗಳನ್ನು ಕಂಡಾಗಲೆಲ್ಲಾ ಊರಿದು ಬಿಳ್ತಿದ್ದ, ಕಿಡಿ ಕಾರುತ್ತಿದ್ದ ದರ್ಶನ್ ಗೆ ಮಾಧ್ಯಮಗಳ ಪ್ರಮುಖ್ಯತೆ ಅರಿವಾದಂತಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಬಲ ಎಷ್ಟಿದೆ ಅನ್ನೋದು ಅರ್ಥವಾದಂತಿದೆ.
ಮಾಧ್ಯಮಗಳಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದರು ಎನ್ನುವ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ನಟ ದರ್ಶನ ಮೇಲೆ ಅಘೋಷಿತ ನಿರ್ಬಂಧ ಹೇರಲಾಗಿತ್ತು. ಅವರ ಕುರಿತಾದ ಯಾವುದೇ ಸುದ್ದಿಗಳನ್ನು ಪ್ರಸಾರ ಮತ್ತು ಪ್ರಕಟಿಸದಂತೆ ಮಾಧ್ಯಮ ಸಂಸ್ಥೆಗಳು ನಿರ್ಧಾರ ತೆಗೆದುಕೊಂಡಿದ್ದವು. ಮಾಧ್ಯಮಗಳ ನಡೆಯನ್ನು ಧಿಕ್ಕರಿಸಿ ದಾಸ ಸೋಷಿಯಲ್ ಮೀಡಿಯಾಗಳ ಮೊರೆ ಹೋಗಿದ್ದರು. ಹೂ ಹೂ..ಪ್ರಯೋಜನವಾಗಲಿಲ್ಲ. ಕ್ರಾಂತಿ ಸಿನಿಮಾ ಬಾಕ್ಸಾಫೀಸ್ ನಲ್ಲಿ ಕಂಗೊಳಿಸಲಿಲ್ಲ. ಕಲೆಕ್ಷನ್ ಮಾಡುವಲ್ಲಿ ಸೋತಿತ್ತು. ಅದಕ್ಕೆ ಕಾರಣ ಮಾಧ್ಯಮಗಳ ಪ್ರಚಾರ ಕೊರತೆ..
ಮಾಧ್ಯಮಗಳನ್ನು ಧಿಕ್ಕರಿಸಿ ನಡೆದಿದ್ದ ದರ್ಶನ್ ಗೆ ತಪ್ಪಿನ ಅರಿವಾಗಿದೆ. ತನ್ನ ಮುಂದಿನ ಸಿನಿಮಾಗಳು ಆಕಾಶ ನೋಡುತ್ತವೆ ಎಂಬ ಭಯ ಕಾಡ್ತಿರುವ ಕಾರಣಕ್ಕೂ ಏನೋ ಧಿಕ್ಕರಿಸಿ ಮಾಧ್ಯಮಗಳ ಮುಂದೆ ದಾಸ ಮಂಡಿಯೂರಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡೆ ಎಲ್ಲರಿಗೂ ಅಚ್ಚರಿ ತಂದಿದೆ. ಅನೇಕರು ಸಂತಸ ಕೂಡ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೊಂದೆಡೆ ಇದರ ವಿರೋಧವಾಗಿ ಅನೇಕ ಮಾತುಗಳು ಕೇಳಿಬರುತ್ತಿವೆ. ಸುದ್ದಿ ವಾಹಿನಿಯ ಮುಖ್ಯಸ್ಥರನ್ನ ಕರಿಸಿ ಸ್ವಾಮಿ ತಪ್ಪಾಯ್ತು..! ಯಾವುದೋ ಕೆಟ್ಟ ಗಳಿಗೆಯಲ್ಲಿ ಹೀಗಾಯ್ತು ಅಂತ ಕ್ಷಮೆ ಕೇಳಿ ನಂತರ ವರಮಹಾಲಕ್ಷ್ಮಿ ಹಬ್ಬದ ದಿನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕೋ ಮೂಲಕ ರಾಜಿ ಸಂಧಾನ ಮಾಡಿಕೊಂಡಿದ್ದಾರೆ.
ಸಮಸ್ತ ಕರ್ನಾಟಕ ಜನತೆಗೆ ನನ್ನ ಸೆಲೆಬ್ರಿಟಿಗಳಿಗೆ ಹಾಗೂ ಹಿರಿಯ ಪತ್ರಕರ್ತರಿಗೆ, ಮಾಧ್ಯಮ ಮಿತ್ರರಿಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು pic.twitter.com/8I1weYojCX
— Darshan Thoogudeepa (@dasadarshan) August 25, 2023
ಕ್ರಾಂತಿ ಸಿನಿಮಾ ಸೋತಾಗಲು ದರ್ಶನ್ ಯಾವುದೇ ಕಾರಣಕ್ಕೂ ಮಾಧ್ಯಮಗಳ ಜೊತೆ ರಾಜಿ ಮಾಡಿಕೊಳ್ಳುವುದಿಲ್ಲ.. ನಾನು ಶರಣಾಗುವುದಿಲ್ಲ ಎಂದಿದ್ದರಂತೆ. ಆದರೆ ಮಾಧ್ಯಮಗಳ ಬೆಂಬಲವಿಲ್ಲದೆ ಯಾವುದೋ ಅಸಾಧ್ಯ ಅನ್ನೋದು ಡಿಬಾಸ್ ಗೆ ಅರಿವಾಗಿದೆ. ಹೀಗಾಗಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನೇತೃತ್ವದಲ್ಲಿ ಸುದ್ದಿ ವಾಹಿನಿಗಳ ಮುಖ್ಯಸ್ಥರನ್ನು ಸ್ಟಾರ್ ಹೋಟೆಲ್ ನಲ್ಲಿ ಸೇರಿಸಿ ಕೈ ಕುಲುಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ನೇಹ ಹಸ್ತ ಚಾಚಿದ್ದಾರೆ. ದಚ್ಚು ಈ ನಡೆ ಕೆಲವರ ಕಣ್ಣು ಕೆಂಪು ಮಾಡಿದೆ. ಪ್ರಚಾರದ ಪ್ರಭೆಗೆ ದರ್ಶನ ಒಳಗಾಗಿದ್ದಾರೆ. ತಮ್ಮ ಮುಂದಿನ ಸಿನಿಮಾಗಳಿಗೆ ಪ್ರಚಾರದ ಅವಶ್ಯಕತೆ ಬೇಕು ಅನ್ನೋದು ಅವರಿಗೆ ಗೊತ್ತಾಗಿದೆ. ಹೀಗಾಗಿ ಬೇರೆ ದಾರಿ ಕಾಣದೇ ಮಾಧ್ಯಮಗಳಿಗೆ ದಾಸ ಶರಣಗಾಗಿದ್ದಾರೆ. ಮಾತು ಆಡಿದ್ರೆ ಹೋಯ್ತು ಮುತ್ತು ಒಡೆದರೆ ಹೋಯ್ತು ಗಾದೆ ಮಾತಿನಂತೆ ಸೆಲೆಬ್ರೆಟಿ ಸ್ಥಾನದಲ್ಲಿರುವ ದರ್ಶನ್ ಇನ್ಮುಂದೆಯಾದ್ರೂ ಮಾತನಾಡುವ ಸ್ವಲ್ಪ ಎಚ್ಚರವಹಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.