ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ಸಿಗುತ್ತಿರುವ ಫೋಟೋ ವೈರಲ್ ಆದ ಬಳಿಕ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಇದು ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ದರ್ಶನ್ ಅವರನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಇಂದು (ಆಗಸ್ಟ್ 28) ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗುತ್ತಿದೆ. ಮಧ್ಯಾಹ್ನ 1 ಗಂಟೆ ಬಳಿಕ ಈ ಪ್ರಕ್ರಿಯೆ ಆರಂಭ ಆಗುವ ಸಾಧ್ಯತೆ ಇದೆ. ಅಂದು ಹಾಗೆ ಈ ಹಿಂದೆ ರೀಲ್ ಖೈದಿಯಾಗಿ ಬಳ್ಳಾರಿ ಜೈಲಿಗೆ ಹೋಗಿದ್ದ ದರ್ಶನ್ ಇದೀಗ ರಿಯಲ್ ಖೈದಿಯಾಗಿ ಹೋಗುತ್ತಿದ್ದಾರೆ.
ದರ್ಶನ್ ಈ ಹಿಂದೆ ತರುಣ್ ಸುಧೀರ್ ನಿರ್ದೇಶನದ ‘ಚೌಕ’ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರ ಮಾಡಿದ್ದರು. ಈ ಸಿನಿಮಾದಲ್ಲಿ ಜೈಲಿನ ದೃಶ್ಯವೊಂದು ಬರುತ್ತದೆ. ಅದನ್ನು ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲೇ ಶೂಟ್ ಮಾಡಲಾಗಿತ್ತು. ದರ್ಶನ್ ಕೂಡ ಈ ದೃಶ್ಯದಲ್ಲಿ ಇದ್ದರು. ಈಗ ಅವರು ಇದೇ ಜೈಲಿಗೆ ಸ್ಥಳಾಂತರ ಆಗುತ್ತಿದ್ದಾರೆ.
ಪೊಲೀಸ್ ಭದ್ರತೆಯಲ್ಲಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಅದಕ್ಕೂ ಮೊದಲು ಒಂದು ಪ್ರಮುಖ ಪ್ರಕ್ರಿಯೆ ಮುಗಿಯಬೇಕಿದೆ. ಇಂದು (ಆಗಸ್ಟ್ 28) ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳಲಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಅವರನ್ನು ಜಡ್ಜ್ ಮುಂದೆ ಹಾಜರು ಮಾಡಲಾಗುತ್ತದೆ. ದರ್ಶನ್ಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಕೋರ್ಟ್ ಪ್ರಕ್ರಿಯೆ ಬಳಿಕ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ.
ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿದ್ದಾರೆ. ಅವರ ಬಂಧನಕ್ಕೆ ಈಗಾಗಲೇ ಮೂರು ತಿಂಗಳು ಪೂರ್ಣಗೊಳ್ಳುತ್ತಾ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಪೊಲೀಸರು ಕೋರ್ಟ್ ಎದುರು ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಆ ಬಳಿಕ ದರ್ಶನ್ ಅವರು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.