ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ದಿನೇ ದಿನವೇ ಬೆನ್ನು ನೋವಿನ ಸಮಸ್ಯೆ ಕಾಡುತ್ತಿದೆ. ಇದರಿಂದ ದರ್ಶನ್ ಸಾಕಷ್ಟು ತೊಂದರೆ ಅನುಭವಿಸ್ತಿದ್ದಾರೆ. ಬಳ್ಳಾರಿ ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ದರ್ಶನ್ ಪರದಾಡುತ್ತಿದ್ದಾರೆ.
ಬೆನ್ನು ನೋವು ಹೆಚ್ಚಾಗಿರುವುದರಿಂದ ವಿಮ್ಸ್ ಆಸ್ಪತ್ರೆಯ ವೈದ್ಯರು ಜೈಲಿನಲ್ಲೇ ದರ್ಶನ್ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಈಗಾಗಲೇ ಬೆನ್ನಿನ ಹಿಂಭಾಗದಲ್ಲಿ ಊತ ಬಂದಿರುವ ಸಾಧ್ಯತೆ ಇದೆ. ಅವರಿಗೆ ಸರ್ಜರಿ ಮಾಡಿಸಲೇಬೇಕಾದ ಅಗತ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ದರ್ಶನ್ಗೆ ಸ್ಕ್ಯಾನ್ ಮಾಡಿಸಲು ವೈದ್ಯರು ಸೂಚನೆ ನೀಡಿದ್ದಾರೆ.
ಆದರೆ, ದರ್ಶನ್ ಅವರು ಸ್ಕ್ಯಾನ್ ಮಾಡಿಸೋದಕ್ಕೆ ರೆಡಿ ಇಲ್ಲ. ‘ನಾನು ಬೆಂಗಳೂರಿಗೆ ಹೋದ್ಮೇಲೆ ಸ್ಕ್ಯಾನ್ ಮಾಡಿಸ್ತೀನಿ. ಸದ್ಯಕ್ಕೆ ನೋವು ನಿವಾರಕ ಮಾತ್ರೆ ಕೊಡಿ ಸಾಕು’ ಎಂದು ದರ್ಶನ್ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ದರ್ಶನ್ ಅವರು ಈಗಾಗಲೇ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಶುಕ್ರವಾರ (ಅಕ್ಟೋಬರ್ 4) ಅರ್ಜಿ ವಿಚಾರಣೆ ನಡೆಯಲಿದೆ. ದರ್ಶನ್ ಅವರು ಜಾಮೀನು ಸಿಕ್ಕೇ ಸಿಗುತ್ತದೆ ಎನ್ನುವ ಭರವಸೆಯಲ್ಲಿ ಇದ್ದಾರೆ. ಈ ವಿಚಾರದಲ್ಲಿ ಕೋರ್ಟ್ ಯಾವ ರೀತಿಯ ಆದೇಶ ಹೊರಡಿಸುತ್ತದೆ ಎಂದು ಕಾದು ನೋಡಬೇಕಿದೆ.
ಜಾಮೀನು ಅರ್ಜಿ ವಿಚಾರಣೆ ಈಗಾಗಲೇ ಎರಡು ಬಾರಿ ಮುಂದಕ್ಕೆ ಹೋಗಿದೆ. ದರ್ಶನ್ ಪರ ವಕೀಲರು ವಾದ ಮಂಡನೆಗೆ ಹೆಚ್ಚಿನ ಸಮಯ ಕೇಳುತ್ತಿದ್ದಾರೆ. ಈ ಕಾರಣದಿಂದ ಅರ್ಜಿ ವಿಚಾರಣೆ ಮುಂದಕ್ಕೆ ಹೋಗುತ್ತಿದೆ.