ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಇದರಿಂದ ದರ್ಶನ್ ರ ಲಕ್ಷಾಂತರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸದ್ಯ ಬೇಸರದಲ್ಲಿರುವ ಅಭಿಮಾನಿಗಳಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಧೈರ್ಯ ತುಂಬಿದ್ದಾರೆ. ತಾಳ್ಮೆಯಿಂದ ಇರಿ, ನ್ಯಾಯಾಲಯದ ಮೇಲೆ ನಂಬಿಕೆ ಇಡಿ ಎಂದು ವಿಜಯಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ನನ್ನ ಪ್ರೀತಿಯ ಸಹೋದರರೇ, ದರ್ಶನ್ ಅವರಿಗೆ ನೀವು, ತಮ್ಮ ಅಭಿಮಾನಿಗಳು ಎಂದರೆ ಅಪಾರವಾದ ಪ್ರೀತಿ. ನೀವು ಅವರನ್ನು ಪ್ರೀತಿಸುವಷ್ಟೇ ಅವರು ತಮ್ಮ “ಸೆಲೆಬ್ರಿಟಿಗಳನ್ನು” ತನ್ನ ಹೃದಯದಲ್ಲೇ ಹೊತ್ತಿರುವುದು ನಿಮಗೇ ಗೊತ್ತಿದೆ. ಇದೊಂದು ಪರೀಕ್ಷೆಯ ಸಮಯ. ನನಗೆ, ನಿಮಗೆ, ನಮ್ಮೆಲ್ಲರಿಗೆ. ನಾವು ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ಹಾನಿಯಾಗುವುದು ನಮಗೆ. ಆದ್ದರಿಂದ ತಾಳ್ಮೆ, ಶಾಂತಿಯಿಂದಿರೋಣ. ನಿಮ್ಮ ಆತಂಕವನ್ನು ನಾನು, ದರ್ಶನರಿಗೆ ತಲುಪಿಸಿದ್ದೇನೆ. ಅವರೂ ನಿಮ್ಮ ಪ್ರತಿ ಕಾಳಜಿ ವ್ಯಕ್ತಪಡಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ನಾವು ನಮ್ಮ ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ. ನಮಗೆ ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗಿದೆ. ಇಂತಹ ಕಷ್ಟದ ಸಮದಲ್ಲಿ, ದರ್ಶನರ ಅನುಪಸ್ಥಿತಿಯನ್ನು ದುರುಪಯೋಗ ಪಡೆಸಿಕೊಂಡು ಅವರಿಗೆ ಕೇಡು ಬಯಸುವ/ಮಾಡುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಒಳ್ಳೆಯ ಸಮಯ ಮತ್ತೆ ಮರಳಿ ಬರಲಿದೆ. ಸತ್ಯಮೇವ ಜಯತೆ ಎಂದು ದರ್ಶನ್ ಪತ್ನಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.