ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ ಹಲವು ದಿನಗಳೇ ಕಳೆದಿದೆ. ದರ್ಶನ್ ಗೆ ಜೈಲೂಟ ಸೇರದೆ ಮನೆಯೂಟಕ್ಕೆ ಹಂಬಲಿಸುತ್ತಿದ್ದಾರೆ. ಆದರೆ ಮ್ಯಾಜಿಸ್ಟ್ರೇಟ್ ಕೋರ್ಟ್ ಮನೆಯೂಟಕ್ಕೆ ನಿರಾಕರಿಸಿದೆ. ಇದೀಗ ಸ್ವತಃ ದರ್ಶನ್ ಜೈಲಾಧಿಕಾರಿಗೆ, ಜೈಲಿನ ಮಹಾನಿರ್ದೇಶಕರಿಗೆ, ವೈದ್ಯಾಧಿಕಾರಿಗೆ, ಮ್ಯಾಜಿಸ್ಟ್ರೇಟ್ಗೆ ಬರೆದ ಪತ್ರ ಬರೆದು ಮನೆಯೂಟ ಪಡೆದುಕೊಳ್ಳಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ನನಗೆ ಮೂಳೆ ಶಸ್ತ್ರಚಿಕಿತ್ಸೆಯಾಗಿದೆ, ಪ್ರೋಟಿನ್ ಅವಶ್ಯಕತೆ ಇದೆ. ಕಾರಾಗೃಹಕ್ಕೆ ದಾಖಲಾದ ದಿನದಿಂದ ಜೈಲೂಟ ಸೇವೆನೆ ಮಾಡುತ್ತಿದ್ದೇನೆ. ನನ್ನ ಆರೋಗ್ಯ, ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಮನೆ ಊಟ ನೀಡುವಂತೆ ಪತ್ರದ ಮೂಲಕ ದರ್ಶನ್ ಬೇಡಿಕೆ ಇಟ್ಟಿದ್ದಾರೆ.
ಇತ್ತೀಚೆಗಷ್ಟೇ ನಟ ದರ್ಶನ್ ಮನೆಯೂಟ ಕೋರಿ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಮೆಮೋ ಅರ್ಜಿಯನ್ನು ವಿಚಾರಣೆಗೆ ಬರುತ್ತಿದ್ದಂತೆ ದರ್ಶನ್ ಪರ ವಕೀಲರು ಹಿಂದಕ್ಕೆ ಪಡೆದಿದ್ದರು. ತಾಂತ್ರಿಕ ಕಾರಣ ನೀಡಿ ದರ್ಶನ್ ಪರ ವಕೀಲರು ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದರು. ಅರ್ಜಿ ವಾಪಸ್ ಪಡೆದ ಕಾರಣ ದರ್ಶನ್ ಜೈಲೂಟವನ್ನೇ ಸೇವಿಸಬೇಕಿದೆ. ಈ ಮಧ್ಯೆ ಮತ್ತೆ ಮನೆಯೂಟಕ್ಕೆ ದರ್ಶನ್ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣಾ ಬಂಧಿ ಸಂಖ್ಯೆ 6106, ದರ್ಶನ್ ಎಸ್ ಆದ ನಾನು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ವಿಚಾರಣಾ ಬಂಧಿಯಾಗಿರುತ್ತೇನೆ. ಕಳೆದ ಮೂರು ತಿಂಗಳ ಹಿಂದೆ ನನಗೆ ಮೂಳೆ ಸಂಬಂಧ ಶಸ್ತ್ರ ಚಿಕಿತ್ಸೆಯಾಗಿರುತ್ತದೆ. ಹಾಗೂ ನಾನು ದಿನ ನಿತ್ಯ ಕೆಲಸದ ನಿಮಿತ್ತ ಕಸರತ್ತು ನಡೆಸುತ್ತಿದ್ದು ನನ್ನ ದೇಹಕ್ಕೆ ಪ್ರೊಟೀನ್ ಡಯೆಟ್ ಅವಶ್ಯಕತೆ ಇರುತ್ತದೆ. ಕಾರಾಗೃಹಕ್ಕೆ ದಾಖಲಾದ ದಿನದಿಂದ ನಾನು ಕಾರಾಗೃಹದಲ್ಲಿ ನೀಡಿದ ಆಹಾರವನ್ನು ಸೇವಿಸುತ್ತಿದ್ದು ನನ್ನ ಆರೋಗ್ಯ ಮತ್ತು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬಿರುತ್ತಿದೆ. ನನ್ನ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಕಾರಾಗೃಹದಲ್ಲಿ ದೊರೆಯುವ ಆಹಾರದ ಜೊತೆ ಮಾನ್ಯರಲ್ಲಿ ಮನವಿ ಇರುವ ಆಹಾರವನ್ನು ನೀಡಬೇಕಾಗಿ ಕೇಳಿ ಕೊಳ್ಳುತ್ತೇನೆ ಎಂದು ಬರೆದಿದ್ದಾರೆ.