ಧಾರವಾಡ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಉಪ ಮಾಹಾಪೌರರ 21ನೇ ಅಧಿಕಾರ ಅವಧಿ ಮುಗಿಯುತ್ತಾ ಬಂದಿದ್ದು, ಈಗ 22ನೇ ಅವಧಿಯ ಎರಡು ಸ್ಥಾನಗಳಿಗೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಇದೇ ತಿಂಗಳ ಜೂನ್ 20, 2023 ರಂದು ಅವಳಿನಗರ ಮಾಹಾನಗರ ಪಾಲಿಕೆಯ ಮಹಾಪೌರ ಹಾಗೂ ಉಪಮಹಾಪೌರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಕುರಿತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ (ಚುನಾವಣೆ)ಯ ಅಧ್ಯಕ್ಷಾಧಿಕಾರಿಗಳಾದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಪಿ.ಸುನೀಲಕುಮಾರ ಅವರು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿ ಸೂಚನೆ ನೀಡಿದ್ದಾರೆ.
ಮುಂಜಾನೆ 9 ರಿಂದ 11 ಗಂಟೆಯವರೆಗೆ ಧಾರವಾಡದ ಪಾಲಿಕೆಯ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಭಾಭವನದಲ್ಲಿ ಮಹಾಪೌರ ಹಾಗೂ ಉಪ ಮಹಾಪೌರ ಸ್ಥಾನಗಳಿಗೆ ನಾಮಪತ್ರಗಳನ್ನು ಸ್ವೀಕರಿಸುವ ಕಾರ್ಯ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಸಭೆ ಆರಂಭಿಸಲು ಸಮಯ ನಿಗದಿ ಮಾಡಲಾಗಿದೆ. 22ನೇ ಅವಧಿಯ ಚುನಾವಣೆಗೆ ಮಹಾಪೌರ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮತ್ತು ಉಪ ಮಹಾಪೌರ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿಯನ್ನು ನಿಗದಿಗೊಳಿಸಲಾಗಿದೆ.
ಮಹಾಪೌರ ಮತ್ತು ಉಪಮಹಾಪೌರ ಸ್ಥಾನಕ್ಕೆ ನಡೆಯುವ ಚುನಾವಣೆ ಪ್ರಕ್ರಿಯೆಯಲ್ಲಿ ಸ್ವೀಕರಿಸಿದ ನಾಮಪತ್ರಗಳ ಪರಿಶೀಲನೆ, ಕ್ರಮಬದ್ಧ ನಾಮಪತ್ರಗಳ ಘೋಷಣೆ, ಉಮೇದುವಾರಿಯನ್ನು ಹಿಂತೆಗೆದುಕೊಳ್ಳುವುದು ಸಮಯ ನೀಡಲಾಗಿದೆ. ಉಮೇದುವಾರರ ಪಟ್ಟಿ ಘೋಷಣೆ ನಂತರ ಅವಿರೋಧ ಆಯ್ಕೆಯಾದ ಫಲಿತಾಂಶ ಘೋಷಣೆ, ಚುನಾವಣೆ ಅಗತ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಮತದಾನ, ನಡುವಳಿಕೆ ಪುಸ್ತಕದಲ್ಲಿ ಸದಸ್ಯರ ಸಹಿ ದಾಖಲಿಸುವುದು, ಮತಗಳ ಎಣಿಕೆ ಹಾಗೂ ಫಲಿತಾಂಶ ಘೋಷಣೆಯಾಗಲಿದೆ.
ಸಂಖ್ಯಾಬಲ ವಿವರ
ಒಟ್ಟು ಸದಸ್ಯರು 82
ಬಿಜೆಪಿ- 39
ಕಾಂಗ್ರೆಸ್- 33
ಎಐಎಂಐಎಂ-3
ಜೆಡಿಎಸ್- 1
ಪಕ್ಷೇತರರು- 6