ಮುಂಬೈ: ಓದುವ ಸಮಯದಲ್ಲಿ ಮೊಬೈಲ್ (Phone) ಯಾಕೆ ಹೆಚ್ಚು ಬಳಸುತ್ತೀಯಾ ಎಂದು ತಂದೆ (Father) ಕೇಳಿದ್ದಕ್ಕೆ ಹುಡುಗಿಯೊಬ್ಬಳು (Girl) ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ (Pune) ನಡೆದಿದೆ. ಪುಣೆಯ ಘೋಡೆಗಾಂವ್ನಲ್ಲಿ 19 ವರ್ಷದ ಹುಡುಗಿ ಓದುತ್ತಿರುವಾಗ ಫೋನ್ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಳು. ಇದನ್ನು ನೋಡಿದ ಆಕೆಯ ತಂದೆ ಗದರಿದ್ದಾರೆ. ಈ ಹಿನ್ನೆಲೆಯಲ್ಲಿ ಬೇಸರಗೊಂಡ ಹುಡುಗಿಯು ಟೆರೇಸ್ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆಗೆ ಸಂಬಂಧಿಸಿ ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಕೆ ಮೊದಲೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ಘಟನೆಯ ಕುರಿತು ಘೋಡೆಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತಳ ತಂದೆ ಉದ್ಯಮಿಯಾಗಿದ್ದು ತಾಯಿ ಗೃಹಿಣಿಯಾಗಿದ್ದಾಳೆ. ಒಬ್ಬಳೆ ಮಗಳಾಗಿದ್ದು, ಈಕೆ 12ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.