ಬೆಂಗಳೂರು: ಉಪ ಮುಖ್ಯಮಂತ್ರಿಯಾಗಿ ಅಜ್ಜಯ್ಯ ಹೆಸರಿನಲ್ಲಿ ಡಿ.ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ ಬಳಿಕ ಅವರು ವಿಧಾನಸೌಧದಲ್ಲಿ ನಡೆಯಲಿರುವಂತ ಮೊದಲ ಸಚಿವ ಸಂಪುಟ ಸಭೆಯಲ್ಲಿ ಭಾಗಿಯಾಗಲು ಆಗಮಿಸಿದ ವೇಳೆಯಲ್ಲಿ, ವಿಧಾನಸೌಧದ ಮೆಟ್ಟಿಲಿಗೆ ದೀರ್ಘ ದಂಡ ನಮಸ್ಕಾರ ಮಾಡಿ, ಅಡ್ಡಬಿದ್ದು ನಮಿಸಿದರು.
ಬೆಂಗಳೂರಿನ ಕಂಠೀರವ ಕ್ರೀಢಾಂಗಣದಲ್ಲಿ ಇಂದು ಕಾಂಗ್ರೆಸ್ ನೂತನ ಸರ್ಕಾರದ ಸಿಎಂ, ಡಿಸಿಎಂ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. ಸಿಎಂ ಆಗಿ ಸಿದ್ಧರಾಮಯ್ಯ, ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದರು. ಇವರ ನಂತ್ರ 8 ಶಾಸಕರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣವಚನವನ್ನು ಸ್ವೀಕರಿಸಿದರು.
ಕಂಠೀರವ ಕ್ರೀಢಾಂಗಣದಿಂದ ವಿಧಾನಸೌಧಕ್ಕೆ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಆಗಮಿಸಿದರು. ಮೊದಲ ಬಾರಿಗೆ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ನಂತ್ರ ವಿಧಾನಸೌಧಕ್ಕೆ ಆಗಮಿಸಿದ ಅವರು, ವಿಧಾನಸೌಧದದ ಮೆಟ್ಟಿಲಿಗೆ ಅಡ್ಡಬಿದ್ದು ನಮಿಸಿ ಒಳಗೆ ತೆರಳಿದರು. ಇನ್ನೂ ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಡೆಯಲಿದ್ದು, 5 ಗ್ಯಾರಂಟಿ ಭರವಸೆಗಳನ್ನು ಜಾರಿಗೊಳಿಸಲಿದೆ.