ಬೆಂಗಳೂರು: ರಾಮನಗರ ಜಿಲ್ಲೆ ಹೆಸರು ಬದಲಾವಣೆ ಮಾಡುವ ವಿಚಾರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಕೊನೆಗೂ ಗೆದ್ದುಬೀಗಿದ್ದಾರೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡುವ ನಿರ್ಧಾರಕ್ಕೆ ಇಂದಿನ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಇನ್ಮುಂದೆ ರಾಮನಗರ ಜಿಲ್ಲೆ ಬೆಂಗಳೂರು ದಕ್ಷಿಣವಾಗಿ ಬ್ರಾಂಡ್ ಆಗಲಿದೆ,
ಸರ್ಕಾರದ ಈ ನಿರ್ಧಾರ ಪರ ವಿರೋಧದ ಚರ್ಚೆಯನ್ನ ಹುಟ್ಟು ಹಾಕಿದ್ದು ದಳಪತಿಗಳ ಕೆಂಗಣ್ಣಿಗೆ ಗುರಿಯಾಗಿದೆ.. ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ 14ವರ್ಷಗಳಲ್ಲೇ ರಾಮನಗರ ಜಿಲ್ಲೆ ತನ್ನ ಐತಿಹಾಸಿಕ ಹೆಸರನ್ನ ಕಳೆದುಕೊಂಡಿದೆ. ಇನ್ಮುಂದೆ ರೇಷ್ಮೇ ನಗರಿ ರಾಮನಗರ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಕರೆಸಿಕೊಳ್ಳಲಿದೆ. ರಾಮನಗರ ಜಿಲ್ಲೆಯ ಹೆಸರು ಬದಲಾಯಿಸೋ ನಿರ್ಧಾರವನ್ನ ರಾಜ್ಯಸರ್ಕಾರ ಮಾಡಿದೆ. ಇದಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿಚಾರವಾಗಿ ಮಾಹಿತಿ ನೀಡಿದ ಕಾನೂನು ಸಚಿವ ಎಚ್ ಕೆ ಪಾಟೀಲ್ ರಾಮನಗರ ಜಿಲ್ಲೆಯ ಹೆಸರು ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಮರು ನಾಮಕರಣ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಜನಪ್ರತಿನಿಧಿಗಳ ಒತ್ತಾಯ, ಜನರ ಬೇಡಿಕೆ ಮೇಲೆ ಈ ನಿರ್ಣಯ ಮಾಡಲಾಗಿದ್ದು, ಬ್ರ್ಯಾಂಡ್ ಬೆಂಗಳೂರು ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಲಾಗಿದೆ. ರಾಮನಗರ ಜಿಲ್ಲೆಯ ಹೆಸರು ಮಾತ್ರ ಬದಲಾವಣೆ ಆಗಲಿದೆ. ಅದನ್ನು ಹೊರತುಪಡಿಸಿ ಉಳಿದ ಎಲ್ಲವೂ ಸದ್ಯ ಇರುವಂತೆ ಇರಲಿದೆ ಎಂದು ತಿಳಿಸಿದ್ರು ಸಚಿವ ಪಾಟೀಲ್.
ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ವೈಯುಕ್ತಿವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಬೇಡಿಕೆ. ಇದರ ಭಾಗವಾಗಿ ಇತ್ತೀಚೆಗೆ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಮನಗರ ಜಿಲ್ಲೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಲು ಮನವಿ ಸಲ್ಲಿಸಿದ್ದರು. ಈ ವೇಳೆ ಸಚಿವ ಸಂಪುಟದಲ್ಲಿ ತೀರ್ಮಾನಿಸಿ ನಿರ್ಧಾರ ಕೈಗೊಳ್ಳಲಾಗುದು ಎಂದು ಸಿದ್ದರಾಮಯ್ಯ ತಿಳಿಸಿದ್ದರು. ಆ ಪ್ರಕಾರ ಇಂದು ಮರುನಾಮಕರಣಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಇತ್ತ ಸರ್ಕಾರದ ಈ ನಿರ್ಧಾರ ಹೆಸರು ಬದಲಾವಣೆ ವಿಚಾರದಲ್ಲಿ ಪರ ವಿರೋಧದ ಚರ್ಚೆಯನ್ನ ಹುಟ್ಟು ಹಾಕಿದೆ. ಹೆಸರು ಬದಲಾದ ಮಾತ್ರಕ್ಕೆ ಜಿಲ್ಲೆಯ ಬ್ರಾಂಡ್ ನಿಜಕ್ಕೂ ಬದಲಾಗತ್ತಾ ಅನ್ನೋದು ಕೆಲವರ ಪ್ರಶ್ನೆಯಾದರೆ, ಬದಲಾದ್ರೆ ಬ್ರಾಂಡ್ ಹೆಚ್ಚಾಗುತ್ತೆ, ಅಭಿವೃದ್ಧಿ ಆಗುತ್ತೆ ಅನ್ನೋದು ಹಲವರ ಅಭಿಪ್ರಾಯ. ಜಿಲ್ಲೆಯ ಹೆಸರು ಬದಲಾವಣೆಯನ್ನ ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಸ್ವಾಗತಿಸಿದ್ದಾರೆ.
ರಾಮನಗರ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಬದಲಾವಣೆಯಿಂದ ಆಗಬಹುದಾದ ಉಪಯೋಗಗಳು…
*ಬೆಂಗಳೂರು ಹೊರಭಾಗ ಅಂದ್ರೆ ರಾಮನಗರ, ಕನಕಪುರ, ಮಾಗಡಿ, ಹಾರೋಹಳ್ಳಿ, ಚನ್ನಪಟ್ಟಣದ ಭೂಮಿಗೆ ಚಿನ್ನದ ಬೆಲೆ
*ಬೂಮ್ ಪಡೆದುಕೊಳ್ಳಲಿರೋ ರಿಯಲ್ ಎಸ್ಟೇಟ್
*ಬೆಂಗಳೂರು ಹೊರಭಾಗವಾಗುವ ಈ ಪ್ರದೇಶ ಇನ್ಮುಂದೆ ಕೈಗಾರಿಕಾ ಪ್ರದೇಶವಾಗಿ ಮಾರ್ಪಾಡು
*ಉದ್ಯೋಗ ಅವಕಾಶಗಳು ಹೆಚ್ಚಳ
*ಹೊಸ ಐಟಿ ಬಿಟಿ ವಲಯ ಇಲ್ಲಿಗೆ ಶಿಫ್ಟ್
*ಬೆಂಗಳೂರು ನಗರಕ್ಕೆ ಇರುವ ಒತ್ತಡ ಕಡಿಮೆಯಾಗೋ ಸಾಧ್ಯತೆ
*ಆರ್ಥಿಕ ಚಟುವಟಿಕೆ ಹೆಚ್ಚಳ,ಬಂಡವಾಳ ಕ್ರೋಢಿಕರಣಕ್ಕೆ ಅನುಕೂಲ
*ಮೆಟ್ರೋ ವಿಸ್ತರಣೆ