ದೆಹಲಿ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತನ್ನ ಹೇಳಿಕೆಯನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿದ್ದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿ ಮೂರು ದಿನಗಳ ಒಳಗಡೆ ಜನತೆ ಮುಂದೆ ಕ್ಷಮೆ ಕೇಳುವಂತೆ ಡೆಡ್ಲೈನ್ ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಮತ್ತು ಜೈರಾಮ್ ರಮೇಶ್ ಅವರು ತಮ್ಮ ಸಂದರ್ಶನದ ತಿರುಚಿದ ವಿಡಿಯೋ ಅಪ್ಲೋಡ್ ಮಾಡಿ ಉದ್ದೇಶಪೂರ್ವಕವಾಗಿ ನನಗೆ ಮತ್ತು ಬಿಜೆಪಿಯ ಇಮೇಜ್ಗೆ ಅಪಖ್ಯಾತಿ ತಂದಿದಿದ್ದಾರೆ ಎಂದು ಗಡ್ಕರಿ ದೂರಿದ್ದಾರೆ.
ಲೀಗಲ್ ನೋಟಿಸ್ ಸ್ವೀಕರಿಸಿದ 24 ಗಂಟೆಗಳ ಒಳಗೆ ಪೋಸ್ಟ್ ಅನ್ನು ಅಳಿಸುವಂತೆ ಮತ್ತು ಮೂರು ದಿನಗಳಲ್ಲಿ ಲಿಖಿತವಾಗಿ ಕ್ಷಮೆಯಾಚಿಸಬೇಕು ಎಂದು ಸೂಚಿಸಿದ್ದಾರೆ. ಡಿಲೀಟ್ ಮಾಡದೇ ಕ್ಷಮೆ ಕೇಳದೇ ಇದ್ದರೆ ಇಬ್ಬರ ವಿರುದ್ಧವೂ ಸಿವಿಲ್ ಮತ್ತು ಕ್ರಿಮಿನಲ್ ಮಾನನಷ್ಟ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸುದ್ದಿ ಪೋರ್ಟಲ್ಗೆ ನೀಡಿದ ಸಂದರ್ಶನದಲ್ಲಿ ಗಡ್ಕರಿ ಅವರು ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ಅದನ್ನು ಪರಿಹಾರ ಮಾಡುವ ಬಗ್ಗೆ ಮಾತನಾಡಿದ್ದರು. ಇಂದು ಹಳ್ಳಿಗಳಲ್ಲಿ ಕೂಲಿಕಾರ್ಮಿಕರು, ರೈತರು ದುಃಖಿತರಾಗಿದ್ದಾರೆ. ಹಳ್ಳಿಗಳಲ್ಲಿ ಉತ್ತಮ ರಸ್ತೆಗಳಿಲ್ಲ. ಶುದ್ಧ ಕುಡಿಯುವ ನೀರಿಲ್ಲ. ಉತ್ತಮ ಆಸ್ಪತ್ರೆಯಿಲ್ಲ ಎಂದು ಗಡ್ಕರಿ ಹೇಳಿದ್ದರು.