ಲೆಬನಾನ್ನ ರಾಜಧಾನಿ ಬೈರುತ್ ಪ್ರದೇಶವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ. ನಿನ್ನೆ ದೊಡ್ಡ ಮಟ್ಟದಲ್ಲಿ ವೈಮಾನಿಕ ದಾಳಿ ನಡೆಸಿದ್ದು, ಪರಿಣಾಮ 492 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಮತ್ತು ಪೂರ್ವ ಲೆಬನಾನ್ನಲ್ಲಿ 300ಕ್ಕೂ ಹೆಚ್ಚು ಹೆಜ್ಬೊಲ್ಲಾ ಉಗ್ರರ ಕೇಂದ್ರವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಹೆಜ್ಬೊಲ್ಲಾ ಸುಮಾರು 200 ರಾಕೆಟ್ಗಳನ್ನು ಉಡಾಯಿಸಿದೆ. ದಕ್ಷಿಣ ಲೆಬನಾನ್ ಮತ್ತು ಬೆಕಾ ಕಣಿವೆಯಲ್ಲಿ ದಾಳಿಗಳು ಕೇಂದ್ರೀಕೃತವಾಗಿವೆ. ಇಲ್ಲಿಯವರೆಗೆ ಮೃತರ ಸಂಖ್ಯೆ ಸುಮಾರು 2006ಕ್ಕೆ ಏರಿಕೆ ಆಗಿದೆ ಎಂದು ವರದಿಯಾಗಿದೆ.
ಇಸ್ರೇಲ್ ಲೆಬನಾನ್ನಲ್ಲಿ ಹೆಜ್ಬೊಲ್ಲಾ ವಿರುದ್ಧ ಮಿಲಿಟರಿ ಕ್ರಮ ತೆಗೆದುಕೊಳ್ತಿರುವುದಾಗಿ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ. ಲೆಬನಾನ್ನ ಸಾಮಾನ್ಯ ಜನರು ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸುವಂತೆ ಕೇಳಿಕೊಂಡಿದ್ದಾರೆ. ಇಸ್ರೇಲ್ನ ಹೋರಾಟ ನಿಮ್ಮ ವಿರುದ್ಧ ಅಲ್ಲ, ಅದು ಹೆಜ್ಬೊಲ್ಲಾ ವಿರುದ್ಧ ಎಂದು ನೆತನ್ಯಾಹು ಲೆಬನಾನ್ ಜನರಿಗೆ ತಿಳಿಸಿದ್ದಾರೆ.
ಇಸ್ರೇಲ್ ಗುರಿ ಲೆಬನಾನ್ನ ರಾಜಧಾನಿಯಾಗಿದೆ. ದಕ್ಷಿಣ ಲೆಬನಾನ್ನಿಂದ ಕನಿಷ್ಠ 10 ಸಾವಿರ ಜನರು ಪಲಾಯನ ಮಾಡುತ್ತಿದ್ದಾರೆ. ಇಸ್ರೇಲ್ನಲ್ಲಿ ಒಂದು ವಾರ ತುರ್ತು ಪರಿಸ್ಥಿತಿಯನ್ನು ಸಹ ಘೋಷಿಸಲಾಗಿದೆ. ಮಿಲಿಟರಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30ರವರೆಗೆ ತುರ್ತು ಪರಿಸ್ಥಿತಿಯನ್ನು ಹೇರಿದ್ದಾರೆ.