ಗದಗದಲ್ಲಿ ನಡೆದ ನಾಲ್ಕು ಅಭಿಮಾನಿಗಳ ದುರ್ಮರಣ ನಟ ಯಶ್ ಅವರ ಹುಟ್ಟುಹಬ್ಬದ ಸಂಭ್ರಮವನ್ನು ಮರೆಯಾಗಿಸಿದೆ. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್ ಈ ಹಿಂದೆ ಮಾಡಿದ್ದ ಮನವಿಗಳು ವೈರಲ್ ಆಗುತ್ತಿವೆ.
‘ದಯವಿಟ್ಟು ನಾನು ಗಾಡಿ ಓಡಿಸುವಾಗ ಅಕ್ಕಪಕ್ಕ ಬರಬೇಡಿ. ನಿಮ್ಮ ಮೊಬೈಲ್ ಹಿಡಿದುಕೊಂಡು ಫೋಟೋಗಳಿಗೆ ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ. ನಾವು 110, 120 ಕಿ.ಮೀ. ಸ್ಪೀಡ್ನಲ್ಲಿ ಹೋಗ್ತಾ ಇರ್ತೀವಿ. ನೀವು ಚೇಸ್ ಮಾಡಿಕೊಂಡು ಬಂದ್ರೆ ಏನಾಗುತ್ತದೆ ಹೇಳಿ. ಬದುಕಿದ್ರೆ ಮತ್ತೆ ನನ್ನ ನೋಡಬಹುದು’ ಎಂದು ಹೇಳಿದ್ದರು.
‘ನನ್ನ ನೋಡದೇ ಇದ್ರೂ ತೊಂದರೆ ಇಲ್ಲ. ಆದರೆ, ನಿಮ್ಮ ಮನೆಯಲ್ಲಿ ವಯಸ್ಸಾದ ತಂದೆ ತಾಯಿ ಇರ್ತಾರೆ. ಆಗತಾನೇ ಮದುವೆ ಆಗಿರ್ತೀರಾ. ಆಗತಾನೇ ಹುಟ್ಟಿದ ಮಗು ಇರುತ್ತದೆ. ಅವರ ಗತಿ ಏನಾಗಬೇಡ? ಅವರು ಸಾಯೋತನಕ ನನ್ನನ್ನು ದೂಷಿಸುತ್ತಾರೆ. ದಯವಿಟ್ಟು ಗಾಡಿಗಳ ಪಕ್ಕ ಬರಬೇಡಿ. ಈ ಮಾತುಗಳನ್ನು ಅರ್ಥ ಮಾಡಿಕೊಳ್ಳಿ. ಕೈ ಮುಗಿದು.. ಕಾಲಿಗೆ ಬಿಳ್ತೀವಿ, ಇನ್ಮೇಲೆ ಈತರ ಮಾಡ್ಕೋಬೇಡಿ’ ಎಂದು ದರ್ಶನ್ ಮನವಿ ಮಾಡಿದ್ದರು.
ಇದೀಗ ಅಂದು ಹುಬ್ಬಳ್ಳಿಯಲ್ಲಿ ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಡಿ ಬಾಸ್ ಹೇಳಿದ ಮಾತುಗಳು ವೈರಲ್ ಆಗುತ್ತಿದೆ. ‘ಡಿ ಬಾಸ್ ಒನ್ಸ್ ಸೆಡ್’ ಎಂಬ ಕ್ಯಾಪ್ಷನ್ನಡಿ ಈ ವಿಡಿಯೋಗಳನ್ನು ದರ್ಶನ್ ಅಭಿಮಾನಿಗಳು ಶೇರ್ ಮಾಡುತ್ತಿದ್ದಾರೆ.