ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಬಂಧನವಾಗಿ ಎರಡು ತಿಂಗಳಾಗುತ್ತ ಬಂದಿದೆ. ತಮ್ಮ ನೆಚ್ಚಿನ ನಟ ನ್ಯಾಯಾಂಗ ಬಂಧನದಲ್ಲಿರುವುದ ಅವರ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿದೆ. ಈ ಮಧ್ಯೆ ನಟ ದರ್ಶನ್ ಅಭಿಮಾನಿಗಳಿಂದ ರಾಜ್ ಕುಮಾರ್ ಅಭಿಮಾನಿಗೆ ಕೊಲೆ ಬೆದರಿಕೆಯ ಆರೋಪ ಕೇಳಿ ಬಂದಿದೆ.
ಡಾ. ರಾಜ್ ಕುಮಾರ್ ಅಭಿಮಾನಿ ಯೋಗಿ ಎಂಬುವವರು ದರ್ಶನ್ ಅಭಿಮಾನಿಗಳಿಂದ ತನಗೆ ಕೊಲೆ ಬೆದರಿಕೆ ಇದೆ ಎಂದು ಪೊಲೀಸರ ಮೊರೆ ಹೋಗಿದ್ದಾರೆ. ಪಶ್ಚಿಮ ವಿಭಾಗದ ಸೈಬರ್ ಠಾಣೆಗೆ ಭೇಟಿ ನೀಡಿದ ಯೋಗಿ ಅವರು ದೂರು ಕೂಡ ಸಲ್ಲಿಸಿದ್ದಾರೆ.
ಮೊಬೈಲ್ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಅಲ್ಲದೇ ಫೇಸ್ ಬುಕ್ನಲ್ಲಿ ನಕಲಿ ಅಕೌಂಟ್ಗಳನ್ನ ತೆರೆದು ವಾರ್ನಿಂಗ್ ಕೊಡುತ್ತಿದ್ದಾರೆ. ಡಿ ಬಾಸ್ ಅಭಿಮಾನಿಗಳ ಕೈಗೆ ಸಿಕ್ಕರೆ ನಿನ್ನನ್ನು ಮುಗಿಸಿ ಬಿಡ್ತೀವಿ ಎಂದು ಮೆಸೇಜ್ ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕೊಲೆ ಬೆದರಿಕೆಯ ಜೊತೆಗೆ ಯೋಗಿ ಫೋಟೋ ಬಳಸಿ ಅವಾಚ್ಯ ಶಬ್ದಗಳಲ್ಲಿ ನಿಂದಿಸಲಾಗುತ್ತಿದೆ. ರಂಗಾರೆಡ್ಡಿ, ನಾಗರಾಜ್ ದಚ್ಚು, ವಿಶ್ವಾಸ್ ವಿಶ್ವ ವಿಶು, ವೀರೇಶ್ ವೀರು, ಡಿ ಬಾಸ್ ಅಭಿಮಾನಿ, ಡಿ ಬಾಸ್ ಅಡ್ಡ, ಕಿಂಗ್ ಬಸವ ಎಂಬ ಫೇಸ್ಬುಕ್ ಖಾತೆಗಳಿಂದ ಬೆದರಿಕೆ ಮೆಸೇಜ್ ಬಂದಿದೆ ಎಂದು ಕನ್ನಡಿಗ ಯೋಗಿ ಪೊಲೀಸರಿಗೆ ದೂರು ನೀಡಿದ್ದಾರೆ.