ಭಾರೀ ಮಳೆಯಿಂದಾಗಿ ಕಸದ ರಾಶಿ ಮೈಮೇಲೆ ಬಿದ್ದು ಮಕ್ಕಳು ಸೇರಿದಂತೆ 21 ಮಂದಿ ಮೃತಪಟ್ಟ ಘಟನೆ ಉಗಾಂಡಾದ ರಾಜಧಾನಿ ಕಂಪಾಲಾದಲ್ಲಿ ಸಂಭವಿಸಿದೆ .
ಭಾರೀ ಮಳೆಯಿಂದ ಉಂಟಾದ ಕುಸಿತದ ನಂತರ ಕಿಟೀಜಿಯ ಉತ್ತರ ಕಂಪಾಲಾ ಜಿಲ್ಲೆಯ ಭೂಕುಸಿತದಲ್ಲಿ ಶನಿವಾರ ಮನೆಗಳು, ಜನರು ಮತ್ತು ಜಾನುವಾರುಗಳು ತ್ಯಾಜ್ಯದ ಪರ್ವತಗಳಲ್ಲಿ ಮುಳುಗಿವೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಘಟನೆಯಲ್ಲಿ ಮಕ್ಕಳು ಸೇರಿ 21 ಮಂದಿ ಮೃತಪಟ್ಟಿದ್ದು 14ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಕಸದ ರಾಶಿ ಹಾಕುವ ಜಾಗದಲ್ಲಿ ಈ ದುರ್ಘಟನೆ ನಡೆದಿದ್ದು, ಘಟನೆಯ ವಿವರಗಳು ಲಭಿಸದೇ ಇದ್ದರೂ ಭಾರೀ ಮಳೆಯಿಂದಾಗಿ ಈ ಅನಾಹುತ ಸಂಭವಿಸಿದೆ ಎಂದು ಅಧಿಕಾರಿಗಳು ಶಂಕಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಕಸದ ರಾಶಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಮುಂತಾದ ವಸ್ತುಗಳನ್ನು ಆಯ್ದುಕೊಳ್ಳಲು ಜನರು ಬರುತ್ತಾರೆ. ಇದನ್ನೇ ಉದ್ಯೋಗ ಮಾಡಿಕೊಂಡ ಕೆಲವರು ಸಮೀಪದಲ್ಲಿಯೇ ಮನೆ ಕಟ್ಟಿಕೊಂಡಿದ್ದಾರೆ. ಇದಕ್ಕೆಲ್ಲಾ ಅವಕಾಶ ನೀಡಿದ್ದು ಅಧಿಕಾರಿಗಳ ಲೋಪವಾಗಿದೆ ಎಂದು ಅಧ್ಯಕ್ಷ ಯೊವೆರಿ ಮುಸೆವೆನಿ ಹೇಳಿದ್ದಾರೆ.