ಅಕ್ಟೋಬರ್ನಲ್ಲಿ ಆರಂಭವಾದ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಿಂದ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಯುದ್ಧದಿಂದ ಇದುವರೆಗೂ 30 ಸಾವಿರಕ್ಕೂ ಅಧಿಕ ಪ್ಯಾಲೆಸ್ಟೀನ್ ಜನರ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯತಿಳಿಸಿದೆ.
ಹಮಾಸ್ ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ಸೇನೆಯು ಆರಂಭಿಸಿದ ದಾಳಿಯ ಮೊದಲ ಗುರಿ ಆಗಿದ್ದು ಗಾಜಾ ನಗರ ಹಾಗೂ ಗಾಜಾ ಪಟ್ಟಿಯ ಉತ್ತರ ಭಾಗ. ಈ ಪ್ರದೇಶದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗಿದೆ, ಇದು ಗಾಜಾ ಪಟ್ಟಿಯ ಇತರ ಪ್ರದೇಶಗಳ ಜೊತೆಗಿನ ಸಂಪರ್ಕವನ್ನು ಬಹುತೇಕ ಕಡಿದುಕೊಂಡಿದೆ.
ಅಪೌಷ್ಟಿಕತೆ, ನಿರ್ಜಲೀಕರಣ ಹಾಗೂ ಆಹಾರ ಕೊರತೆಯ ಕಾರಣದಿಂದಾಗಿ ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯಲ್ಲಿ ಮಕ್ಕಳು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಇಂತಹ ಸಾವುಗಳು ಇನ್ನಷ್ಟು ಆಗುವುದನ್ನು ತಡೆಯಲು ಅಂತರರಾಷ್ಟ್ರೀಯ ಸಂಘಟನೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್-ಕುದ್ರಾ ಮನವಿ ಮಾಡಿದ್ದಾರೆ.
ಗಾಜಾ ಪಟ್ಟಿಯಲ್ಲಿ ಬುಧವಾರ ರಾತ್ರಿ ನಡೆದ ದಾಳಿಗಳಲ್ಲಿ ಕನಿಷ್ಠ 79 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ. ಇಸ್ರೇಲ್ ಮತ್ತು ಹಮಾಸ್ ನಡುವೆ ಕನಿಷ್ಠ ಆರು ವಾರಗಳ ಕದನ ವಿರಾಮ ಜಾರಿಗೆ ತರಲು ಈಜಿಪ್ಟ್, ಕತಾರ್ ಮತ್ತು ಅಮೆರಿಕದ ಮಧ್ಯಸ್ಥಿಕೆದಾರರು ಯತ್ನಿಸುತ್ತಿದ್ದಾರೆ. ರಂಜಾನ್ ಮಾಸ ಶುರುವಾಗುವ ಮೊದಲೇ ಕದನ ವಿರಾಮ ಘೋಷಣೆ ಸಾಧ್ಯವಾಗಬಹುದು ಭರವಸೆ ಇದೆ.