ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇದಕ್ಕೂ ಮುನ್ನ ಬರೋಬ್ಬರಿ 5 ಬಾರಿ ರನ್ನರ್ಸ್ ಅಪ್ ಸ್ಥಾನ ಪಡೆದಿದ್ದ ಗಯಾನಾ ವಾರಿಯರ್ಸ್ ತಂಡ ಈಗ ತನ್ನ ಆರನೇ ಪ್ರಯತ್ನದಲ್ಲಿ ಚಾಂಪಿಯನ್ಸ್ ಪಟ್ಟ ಪಡೆದು ಇತಿಹಾಸ ನಿರ್ಮಾಣ ಮಾಡಿದೆ. ಕೆರಿಬಿಯನ್ನ 5 ದೇಶಗಳ ನಡುವೆ ನಡೆಯುವ ಟಿ20 ಕ್ರಿಕೆಟ್ ಟೂರ್ನಿ ಇದಾಗಿದ್ದು, ಟ್ರಿನಿಡಾಡ್ ಅಂಡ್ ಟೊಬಾಗೊ, ಸೇಂಟ್ ಕಿಟ್ಸ್ ಅಂಡ್ ನೆವೀಸ್ ಪೇಟ್ರಿಯಟ್ಸ್, ಗಯಾನಾ ವಾರಿಯರ್ಸ್, ಬಾರ್ಬೇಡೊಸ್ ಮತ್ತು ಸೇಂಟ್ ಲೂಸಿಯಾ ತಂಡಗಳು ಸ್ಪರ್ಧೆಯಲ್ಲಿವೆ. ಈ ಬಾರಿಯ ಫೈನಲ್ನಲ್ಲಿ ಟ್ರಿನ್ಬಾಗೊ ನೈಟ್ ರೈಡರ್ಸ್ ಎದುರು ಗಯಾನಾ ವಾರಿಯರ್ಸ್ ತಂಡ ಏಕಪಕ್ಷೀಯ ಜಯ ದಾಖಲಿಸಿ ಟ್ರೋಫಿ ಮುಡಿಗೇರಿಸಿಕೊಂಡಿತು.
ಗಯಾನಾ ವಾರಿಯರ್ಸ್ ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದುಕೊಟ್ಟ ಬಳಿಕ ಭಾವುಕರಾಗಿದ್ದ ಕ್ಯಾಪ್ಟನ್ ಇಮ್ರಾನ್ ತಾಹಿರ್, ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ಗೆ ಧನ್ಯವಾದ ಹೇಳಿದ್ದಾರೆ. ತಮ್ಮ ಕ್ಯಾಪ್ಟನ್ಸಿ ಬಗ್ಗೆ ಯಾರೊಬ್ಬರಿಗೂ ಕಿಂಚಿತ್ತೂ ವಿಶ್ವಾಸ ಇಲ್ಲದೇ ಇದ್ದಂತಹ ಸಂದರ್ಭದಲ್ಲಿ ಅಶ್ವಿನ್ ಒಬ್ಬರೇ ಟೂರ್ನಿಗೂ ಮೊದಲೇ ನೀವೇ ಚಾಂಪಿಯನ್ಸ್ ಎಂದು ಭವಿಷ್ಯ ಹೇಳಿದ್ದರು ಎಂದು ತಾಹಿರ್ ನುಡಿದಿದ್ದಾರೆ. ಟಿ20 ಲೀಗ್ ಇತಿಹಾಸದಲ್ಲಿ ಫ್ರಾಂಚೈಸಿ ತಂಡವೊಂದಕ್ಕೆ ಟ್ರೋಫಿ ಗೆದ್ದುಕೊಟ್ಟ ಅತ್ಯಂತ ಹಿರಿಯ ನಾಯಕ ಎಂಬ ದಾಖಲೆ ಈಗ ಇಮ್ರಾನ್ ತಾಹಿರ್ ಅವರದ್ದಾಗಿದೆ.
:ಈ ಸಂದರ್ಭದಲ್ಲಿ ರವಿ ಅಶ್ವಿನ್ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಬಾರಿ ಟೂರ್ನಿ ಆರಂಭಕ್ಕೂ ಮೊದಲೇ ನನ್ನಿಂದ ಸಿಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯ ಎಂದು ಅವರು ಹೇಳಿದ್ದರು. ನಾನು ಕ್ಯಾಪ್ಟನ್ ಆಗಿ ಆಯ್ಕೆಯಾದ ಬಳಿಕ ಹಲವರು ತಮಾಷೆ ಮಾಡಿದ್ದರು,” ಎಂದು ತಾಹಿರ್ ಹೇಳಿಕೊಂಡಿದ್ದಾರೆ.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಗಯಾನಾ ವಾರಿಯರ್ಸ್ ತಂಡ ಎದುರಾಳಿಯನ್ನು ಕೇವಲ 94 ರನ್ಗಳ ಅಲ್ಪ ಮೊತ್ತಕ್ಕೆ ಆಲ್ಔಟ್ ಮಾಡಿತು. ಕ್ಯಾಪ್ಟನ್ ಇಮ್ರಾನ್ ತಾಹಿರ್ (8ಕ್ಕೆ 2) ಮತ್ತು ಸ್ಪಿನ್ನರ್ ಗುಡಕೇಶ್ ಮೋತಿ (7ಕ್ಕೆ 2) ಹಾಗೂ ವೇಗದ ಬೌಲರ್ ಡ್ವೇಯ್ನ್ ಪ್ರಿಟೋರಿಯಸ್ (26ಕ್ಕೆ 4) ಭರ್ಜರಿ ದಾಳಿ ಸಂಘಟಿಸಿ ನೈಟ್ರೈಡರ್ಸ್ ಬ್ಯಾಟರ್ಗಳನ್ನು ಬೇಟೆಯಾಡಿದರು.