ದೊಡ್ಡಬಳ್ಳಾಪುರ: ಕಳೆದ ಒಂದು ವಾರದಿಂದ ಕುಡಿಯುವ ನೀರಿನ ಪೂರೈಕೆ ಇಲ್ಲದೆ ತಿರುಮಗೊಂಡನಹಳ್ಳಿ ಗ್ರಾಮಸ್ಥರು ಹಾಗು ಜಾನುವಾರು ಗಳು ಪರದಾಡುವ ಪರಿಸ್ಥಿತಿ ಬಂದಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ತಿರುಮಗೊಂಡನಹಳ್ಳಿ ಗ್ರಾಮದಲ್ಲಿ 150 ಕ್ಕೂ ಹೆಚ್ಚು ಮನೆಗಳಿದ್ದು ಜಾನುವಾರುಗಳ ಸಂಖ್ಯೆ ಕೂಡ ಹೆಚ್ಚಾಗಿವೆ..
ಗ್ರಾಮದಲ್ಲಿ ಕೇವಲ ಒಂದು ಬೋರ್ ವೆಲ್ ಇದ್ದು, 24 ಗಂಟೆ ಕರೆಂಟ್ ನೀಡದೆ ನೀರಿನ ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿದೆ. ಹಾಡೋನಹಳ್ಳಿ ಗ್ರಾಮ ಪಂಚಾಯ್ತಿ ಪ್ರಾರಂಭ ದಿನದಿಂದಲೂ ಕೂಡ ತಿರುಮಗೊಂಡನಹಳ್ಳಿ ಗ್ರಾಮದ ಜನರಿಗೆ ಅನ್ಯಾಯ ಮಾಡುತ್ತಿದ್ದು ಪಂಚಾಯ್ತಿ ಇಂದ ಸಿಗಬೇಕಾದ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.
ರಾಜಕೀಯ ಬಣ್ಣದ ತೇಪೆ ಹಾಕಿ ಗ್ರಾಮಕ್ಕೆ ಸಿಗಬೇಕಾದ ಕನಿಷ್ಠ ಸೌಕರ್ಯಗಳನ್ನು ಕೂಡ ಇವರು ನೀಡುತ್ತಿಲ್ಲ.ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪಂಚಾಯ್ತಿ ಪ್ರತಿಭಟನೆ ಮಾಡಿದ್ದರು. ಕೇವಲ ಕಾಟಚಾರಕ್ಕೆ ನೀರನ್ನು ಪೂರೈಕೆ ಮಾಡಿ ಗ್ರಾಮಸ್ಥರು ಕಣ್ಣೊರೆಸುವ ತಂತ್ರ ರೂಪಿಸಿದರು..
ದಶಕಗಳಿಂದ ತಿರುಮಗೊಂಡನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆ ಮಾಡುವಲ್ಲಿ ವಿಫಲವಾಗಿದ್ದು, ಗ್ರಾಮ ಪಂಚಾಯ್ತಿ ಸದಸ್ಯರುಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಗಾದೆ ನೆನಪಾಗುತ್ತೆ ಎಂದು ಗ್ರಾಮಸ್ಥರು ಆರೋಪಿಸಿದರು..