ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ದೆಹಲಿ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಡೀಪ್ ಫೇಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ತಮ್ಮ ಹೇಳಿಕೆಯನ್ನು ನೀಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳ ವರದಿ ಮಾಡಿವೆ.
ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು. ದೇಶದಾದ್ಯಂತ ಈ ನಡೆಯನ್ನು ಖಂಡಿಸಿ, ಅನೇಕರು ಆಕ್ರೋಶ ಹೊರ ಹಾಕಿದ್ದರು. ನಟ ಅಮಿತಾಭ್ ಬಚ್ಚನ್ ಸೇರಿದಂತೆ ಸಾಕಷ್ಟು ಕಲಾವಿದರು ಇದರ ವಿರುದ್ದದ ಕ್ರಮಕ್ಕೆ ಒತ್ತಾಯ ಮಾಡಿದ್ದರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಡ ಕ್ರಮಕ್ಕೆ ಮುಂದಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದು ಈ ಬಗ್ಗೆ ಹೇಳಿಕೆ ಪಡೆಯಲು ರಶ್ಮಿಕಾ ಅವರನ್ನು ಠಾಣೆಗೆ ಬರುವಂತೆ ತಿಳಿಸಿದ್ದರು. ಈ ಸಂಬಂಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ನಟಿ ತಮ್ಮ ಹೇಳಿಕೆ ನೀಡಿದ್ದಾರೆ.
ಡೀಪ್ಫೇಕ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕಾಗಿ ಸಾಕಷ್ಟು ಜನರು ಒತ್ತಾಯಿಸಿದ್ದರು. ಒತ್ತಡ ಹೆಚ್ಚಾಗುತ್ತಿದ್ದಂತೆಯೇ ಪೊಲೀಸರು ಆಸಾಮಿಗಳಿಗೆ ಬಲೆ ಬೀಸಿದ್ದರು. ಕೊನೆಗೂ ವ್ಯಕ್ತಿಯೊಬ್ಬನ ಬಂಧನವಾಗಿತ್ತು. ರಶ್ಮಿಕಾ ಸೇರಿದಂತೆ ಹಲವರ ಡೀಪ್ಫೇಕ್ ವಿಡಿಯೋ ಮಾಡಿದ್ದ ಆಂಧ್ರ ಪ್ರದೇಶದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಆರೋಪಿ ಬಂಧನದ ಬಳಿಕ ರಶ್ಮಿಕಾ ಪ್ರತಿಕ್ರಿಯೆ ಕೂಡ ನೀಡಿದ್ದರು.
ವೃತ್ತಿಯಲ್ಲಿ ಡಿಜಿಟಲ್ ಮಾರ್ಕೆಟರ್ ಆಗಿ ಕೆಲಸ ನಿರ್ವಹಿಸುತ್ತಿರುವ, ಆಂಧ್ರ ಪ್ರದೇಶದ ಗುಂಟೂರು ಮೂಲದ ನವೀನ್ ಈಮಾನಿ (24) ಎಂಬಾತನ್ನನು ಪೊಲೀಸರು ಬಂಧಿಸಿದ್ದಾರೆ.