ಕೌಲಾಲಂಪುರ: ಮೂರು ದಿನಗಳ ಕಾಲ ಮಲೇಷ್ಯಾ ಪ್ರವಾದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೌಲಾಲಂಪುರದಲ್ಲಿ ಭಾರತೀಯ ರಾಷ್ಟ್ರೀಯ ಸೇನೆ ಯೋಧರ ಸಮ್ಮುಖದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಪ್ರತಿಮೆಯನ್ನು ಅನಾವರಣಗೊಳಿಸಿದ ರಾಜನಾಥ್ ಸಿಂಗ್ ಅವರು, ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರಬೋಸ್ ಶೌರ್ಯ, ನಾಯಕತ್ವ ಮತ್ತು ದೇಶಭಕ್ತಿಯ ಸಂಕೇತ ಎಂದು ಬಣ್ಣಿಸಿದರು.
ಈ ಕುರಿತ ಚಿತ್ರಗಳನ್ನು ಟ್ವೀಟ್ ಮಾಡಿರುವ ರಾಜನಾಥ್ ಸಿಂಗ್, ನೇತಾಜಿ ಮತ್ತು ಐಎನ್ಎ ಮಲೇಷ್ಯಾದಲ್ಲಿ ಪ್ರಮುಖ ಪರಂಪರೆಯನ್ನು ಹೊಂದಿದೆ. ಶೌರ್ಯ, ದೇಶಭಕ್ತಿಯ ಪ್ರತೀಕವಾದ ಸುಭಾಷ್ ಚಂದ್ರ ಬೋಸ್ ಅವರು ಭಾರತ ಮತ್ತು ಮಲೇಷ್ಯಾದಲ್ಲಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ ಬರ್ಮಾ ಗಡಿಯಲ್ಲಿ ಸುಭಾಷ್ ಚಂದ್ರ ಬೋಸ್ ಜೊತೆಗೆ ಹೋರಾಡಿದ್ದ 99 ವರ್ಷದ ಹಿರಿಯ ಎಐಎನ್ ಎ ಹೋರಾಟಗಾರ ಎರಡನೇ ಲೆಫ್ಟಿನೆಂಟ್ ಸುಂದರಮ್ ಅವರನ್ನು ರಾಜನಾಥ್ ಸಿಂಗ್ ಸನ್ಮಾನಿಸಿದ್ದಾರೆ.