ಬೆಂಗಳೂರು: ಬೆಂಗಳೂರಿನ ಹೈಕೋರ್ಟ್ ಪೀಠವು ರಿಟ್ ಅರ್ಜಿಯಲ್ಲಿ ಕಚೇರಿ ಆಕ್ಷೇಪಣೆ ಪೂರೈಸಲು ವಿಳಂಬ ತೋರಿದ್ದ ಅರ್ಜಿದಾರರೊಬ್ಬರಿಗೆ ವಕೀಲರೊಬ್ಬರ ವಗೈರೆಗಳು’ ಪುಸ್ತಕವನ್ನು ಕರ್ನಾಟಕ ನ್ಯಾಯಾಂಗ ಅಕಾಡೆಮಿಗೆ ಸಲ್ಲಿಸುವ ದಂಡ ವಿಧಿಸಿದೆ. ಭಾಗ್ಯನಗರದ ಮಹಾಲಕ್ಷ್ಮಮ್ಮ ಮತ್ತು ಜಿ.ಮಂಗಳಾ ಎಂಬುವರು ಭೂ ಸ್ವಾಧೀನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸಂಬಂಧ ಕಚೇರಿ ಆಕ್ಷೇಪಣೆಗಳನ್ನು ಅರ್ಜಿದಾರರ ಪರ ವಕೀಲರು ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ಅರ್ಜಿಯು ವಿಚಾರಣೆಗೆ ಮಾನ್ಯತೆಯನ್ನು ಕಳೆದುಕೊಂಡಿತ್ತು.
ಆದರೆ, ಅರ್ಜಿಯನ್ನು ಮತ್ತೆ ವಿಚಾರಣೆಗೆ ಪರಿಗಣಿಸುವಂತೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ, “ಅರ್ಜಿ ಪುರಸ್ಕರಿಸಲಾಗುತ್ತಿದೆ. ಆದರೆ, ನಿಮ್ಮ ನಿರ್ಲಕ್ಷ್ಯಕ್ಕೆ ದಂಡದ ರೂಪದಲ್ಲಿ ವಕೀಲ ಸಿ.ಹೆಚ್. ಹನುಮಂತರಾಯ ಅವರು ಬರೆದಿರುವ ‘ವಕೀಲರೊಬ್ಬರ ವಗೈರೆಗಳು’ ಪುಸ್ತಕವನ್ನು ಅಕಾಡೆಮಿಗೆ ನೀಡಿ ಮತ್ತು ಒಂದು ವಾರದಲ್ಲಿ ಕಚೇರಿ ಆಕ್ಷೇಪಣೆ ಸರಿಪಡಿಸಬೇಕು” ಎಂದು ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.