ಬೆಂಗಳೂರು: ದೆಹಲಿಯಲ್ಲಿ ಒಂದು ವರ್ಷ ಕಾಲ ಹೋರಾಟ ಮಾಡಿದ ರೈತರಿಗೆ 2021 ರ ಡಿಸೆಂಬರ್ 21 ರಂದು ಪ್ರಧಾನ ಮಂತ್ರಿಗಳು ನೀಡಿದ್ದ ಭರವಸೆ ಈಡೇರದ ಕಾರಣ ದೇಶಾದ್ಯಂತ ಮುಂದಿನ ಫೆಬ್ರವರಿ 26 ಕ್ಕೆ ದೆಹಲಿ ಚಲೋ (Delhi Chalo) ಮಾಡಲು ರೈತರು ತೀರ್ಮಾನಿಸಿದ್ದಾರೆ.
ದೇಶದ ರೈತರ ಪ್ರಮುಖ 7 ಒತ್ತಾಯಗಳ ಬಗ್ಗೆ ‘ದೆಹಲಿ ಚಲೋ’ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ರಾಜಕೀಯತರವಾಗಿ ರೈತರನ್ನ ಜಾಗೃತಿ ಮೂಡಿಸಲು ದೇಶಾದ್ಯಂತ ಕಿಸಾನ್ ಮಹಾ ಪಂಚಾಯತ್ ನಡೆಸಲಾಗುತ್ತಿದೆ. ಈಗಾಗಲೇ ವಿವಿಧ ರಾಜ್ಯಗಳಲ್ಲಿ 6 ಕಿಸಾನ್ ಮಹಾ ಪಂಚಾಯತ್ಗಳನ್ನು ಒಡಿಸ್ಸಾದ ಭುವನೇಶ್ವರ, ಪಂಜಾಬಿನ ಲೂಧಿಯಾನ ಮತ್ತು ಮೊಗಾ, ಕೇರಳದ ಪಾಲಕ್ಕಾಡ್, ತಮಿಳುನಾಡಿನ ಚೆನ್ನೈ, ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆಸಲಾಗಿದೆ. ಮುಂಬರುವ ಒಂದೂವರೆ ತಿಂಗಳಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಇನ್ನೂ 14 ಕಿಸಾನ್ ಮಹಾ ಪಂಚಾಯತ್ ಹಮ್ಮಿಕೊಳ್ಳಲಾಗಿದೆ.
ದೆಹಲಿ ಚಲೋ ಕಾರ್ಯಕ್ರಮದ ಪ್ರಮುಖ ಒತ್ತಾಯಗಳು
* ಡಾ. ಸ್ವಾಮಿನಾಥನ್ ವರದಿಯಂತೆ C2+50% ಸೂತ್ರದ ಪ್ರಕಾರ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. MSP ಅನ್ನು ಖಾತರಿಪಡಿಸಲು ಕಾನೂನನ್ನು ಮಾಡಬೇಕು.
* ದೇಶದ ಎಲ್ಲ ರೈತರನ್ನು ಸಂಪೂರ್ಣ ಕೃಷಿ ಸಾಲದಿಂದ ಋಣಮುಕ್ತರನ್ನಾಗಿಸಬೇಕು.
* ಭೂಸ್ವಾಧೀನ ಕಾನೂನು 2013 ರಲ್ಲಿ ರಾಜ್ಯ ಸರ್ಕಾರಗಳು ಮಾಡಿದ ಬದಲಾವಣೆಗಳನ್ನು ತಕ್ಷಣವೇ ಹಿಂಪಡೆಯಬೇಕು. 70% ರೈತರ ಲಿಖಿತ ಅನುಮತಿ ಮತ್ತು ಯಾವುದೇ ಭೂಸ್ವಾಧೀನಕ್ಕೆ ಮೊದಲು ಬಡ್ಡಿದರ ಜೊತೆಗೆ 4 ಪಟ್ಟು ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಭೂ ಸ್ವಾಧೀನ ಕಾನೂನು 2013 ಅನ್ನು ಜಾರಿಗೊಳಿಸಬೇಕು.
* ಎಲ್ಲಾ ಕೃಷಿ ಉತ್ಪನ್ನಗಳ ಆಮದು ಸುಂಕವನ್ನು ಹೆಚ್ಚಿಸಿ, ಕೃಷಿ ಉತ್ಪನ್ನಗಳ ಬೆಲೆ ಕುಸಿಯದಂತೆ ರಕ್ಷಿಸಬೇಕು. ಭಾರತ ಸರ್ಕಾರ ಡಬ್ಲ್ಯೂಟಿಒದಿಂದ ಹೊರಬರಬೇಕು. ಎಲ್ಲಾ ಮುಕ್ತ ವ್ಯಾಪಾರ ಒಪ್ಪಂದಗಳನ್ನು ರದ್ದುಗೊಳಿಸಬೇಕು. ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆಯನ್ನು ನಿಲ್ಲಿಸಬೇಕು.
* ವಿದ್ಯುತ್ ಮಂಡಳಿಗಳ ಖಾಸಗೀಕರಣ ಬೇಡ. ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನಿಲ್ಲಿಸುವ ಹುನ್ನಾರ ನಿಲ್ಲಬೇಕು.
* ಕೃಷಿ ಮತ್ತು ಚಿಲ್ಲರೆ ಸಣ್ಣ ಉದ್ಯಮಗಳಿಗೆ ಮಾತ್ರ ಮೀಸಲಿಡಬೇಕು. ಕೃಷಿಯಲ್ಲಿ ಎಫ್ಡಿಐ ಮತ್ತು ಇ-ಕಾಮರ್ಸ್ ಸೇರಿದಂತೆ ಚಿಲ್ಲರೆ ವ್ಯಾಪಾರದ ಎಲ್ಲಾ ಸ್ವರೂಪಗಳನ್ನು ನಿಷೇಧಿಸಲಾಗುವುದು. ಕೃಷಿ ಮತ್ತು ಚಿಲ್ಲರೆ ವ್ಯಾಪಾರದ ಕಾರ್ಪೊರೇಟೀಕರಣವನ್ನು ತಡೆಗಟ್ಟಲು ನೀತಿ ಮತ್ತು ಕಾನೂನು ಜಾರಿ ಮಾಡಬೇಕು.
* 60 ವರ್ಷ ತುಂಬಿದ ರೈತರಿಗೆ ಪಿಂಚಣಿಯನ್ನು ಮಾಸಿಕ ಐದು ಸಾವಿರ ನಿಗದಿಪಡಿಸಬೇಕು