ನವದೆಹಲಿ:ದೆಹಲಿ ಮದ್ಯದ ಹಗರಣಕ್ಕೆ (Delhi liquor scam) ಸಂಬಂಧಿಸಿದಂತೆ ಫೆಬ್ರವರಿಯಿಂದ ಜೈಲಿನಲ್ಲಿರುವ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರು ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಪತ್ನಿಯನ್ನು ಭೇಟಿಯಾಗುವುದಕ್ಕೆ ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ. ಆಟೋಇಮ್ಯೂನ್ ಡಿಸಾರ್ಡರ್, ಮಲ್ಟಿಪಲ್ ಸ್ಕ್ಲೆರೋಸಿಸ್ ನಿಂದ ಬಳಲುತ್ತಿರುವ ಪತ್ನಿಯನ್ನು ಇಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಭೇಟಿಯಾಗಲು ದೆಹಲಿ ಹೈಕೋರ್ಟ್ (Delhi High Court) ಆಮ್ ಆದ್ಮಿ ಪಕ್ಷದ ನಾಯಕ ಸಿಸೋಡಿಯಾ ಅವರಿಗೆ ಅನುಮತಿ ನೀಡಿದೆ.
ಯಾವುದೇ ಗ್ಯಾಜೆಟ್ಗಳನ್ನು ಅನುಮತಿಸಲಾಗುವುದಿಲ್ಲ ಮತ್ತು ಮಾಧ್ಯಮದೊಂದಿಗೆ ಯಾವುದೇ ಸಂವಾದ ನಡೆಸಬಾರದು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ, ಎಎಪಿ ನಾಯಕ, ತಮ್ಮ ಪತ್ನಿಯ ಆರೋಗ್ಯವನ್ನು ಉಲ್ಲೇಖಿಸಿ ಮಧ್ಯಂತರ ಜಾಮೀನು ಕೋರಿದ್ದರು.. ಆರ್ಥಿಕ ಅಪರಾಧಗಳ ತನಿಖೆ ನಡೆಸುವ ಸಂಸ್ಥೆಯಾದ ಜಾರಿ ನಿರ್ದೇಶನಾಲಯಕ್ಕೆ ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಾಲಯ ಕೇಳಿದೆ. ಏತನ್ಮಧ್ಯೆ, ಎಎಪಿ ನಾಯಕನ ಸಾಮಾನ್ಯ ಜಾಮೀನು ಅರ್ಜಿಯ ಆದೇಶವನ್ನು ನ್ಯಾಯಾಲಯ ಇಂದು ಕಾಯ್ದಿರಿಸಿದೆ