ನವದೆಹಲಿ: ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ತಮ್ಮನ್ನು ಸಂಪರ್ಕಿಸಿದ ಮಹಿಳೆಯ ವಿವರಗಳನ್ನು ನೀಡಿ, ಅವರಿಗೆ ಭದ್ರತೆ ನೀಡಲಾಗುವುದು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ದೆಹಲಿ ಪೊಲೀಸರು ಗುರುವಾರ ನೋಟಿಸ್ ಜಾರಿ ಮಾಡಿದ್ದಾರೆ. “ಪೊಲೀಸರು ಸಾಮಾಜಿಕ ಮಾಧ್ಯಮದ ಪೋಸ್ಟ್ಗಳನ್ನು ಗಮನದಲ್ಲಿಟ್ಟುಕೊಂಡು ಪ್ರಶ್ನಾವಳಿಗಳ ಪಟ್ಟಿಯನ್ನು ರಾಹುಲ್ ಗಾಂಧಿಗೆ ಕಳುಹಿಸಿದ್ದಾರೆ” ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಶ್ರೀನಗರದಲ್ಲಿ ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ, “ಒಂದು ನಿರ್ದಿಷ್ಟ ಪ್ರಕರಣದಲ್ಲಿ ಒಬ್ಬ ಹುಡುಗಿ ತಮ್ಮ ಮೇಲೆ ಅತ್ಯಾಚಾರ ನಡೆದಿದೆ ಎಂದು ಅಳಲು ತೋಡಿಕೊಂಡಳು. ಹಾಗ ನಾನು ಪೊಲೀಸರಿಗೆ ಕರೆ ಮಾಡಬೇಕೇ ಎಂದು ಪ್ರಶ್ನಿಸಿದೆ. ಆದರೆ ಪೊಲೀಸರಿಗೆ ಕರೆ ಮಾಡಬೇಡಿ. ಅದರಿಂದ ನನಗೆ ಅವಮಾನವಾಗುತ್ತದೆ ಎಂದು ಹೇಳಿರುವುದಾಗಿ” ತಿಳಿಸಿದ್ದರು.