ಬೆಂಗಳೂರು: ಬೆಸ್ಕಾಂ ಅಧಿಕಾರಿಯೊಬ್ಬರು ಕಟ್ಟಡವೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮಂಜೂರಾತಿ ನೀಡಲು 28 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಭರತ್ ಚೌಹಾಣ್ ಬಂಧಿತ ಬೆಸ್ಕಾಂ ಎಇಇ ಎಂದು ಗುರುತಿಸಲಾಗಿದೆ.
ಜಿಗಣಿ ಸಮೀಪದ ನಂಜಾಪುರ ನಿವಾಸಿ ಶಶಿಶೇಖರ್ ಎಂಬುವವರು ಕಟ್ಟಡೊಂದಕ್ಕೆ ವಿದ್ಯುತ್ ಸಂಪರ್ಕಕ್ಕೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದರು.
ಎಇಇ ಅವರನ್ನು ಭೇಟಿಮಾಡಿದ್ದ ಅರ್ಜಿದಾರರು, ಮುಂದಿನ ಪ್ರಕ್ರಿಯೆ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಮಂಜೂರಾತಿ ನೀಡಲು ₹ 28,000 ಲಂಚ ಕೊಡುವಂತೆ ಆರೋಪಿ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮಂಗಳವಾರ ಕಚೇರಿಗೆ ಬಂದು ಲಂಚದ ಹಣ ತಲುಪಿಸುವಂತೆ ಎಇಇ ಸೂಚಿಸಿದ್ದರು. ಅದರಂತೆ ಶಶಿಶೇಖರ್ ಬೆಸ್ಕಾಂ ಜಿಗಣಿ ಉಪ ವಿಭಾಗದ ಕಚೇರಿಗೆ ಹೋಗಿ ಹಣ ತಲುಪಿಸಿದರು. ತಕ್ಷಣ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಭರತ್ ಚೌಹಾಣ್ ಅವರನ್ನು ಬಂಧಿಸಿದ್ದಾರೆ.