ಬೆಂಗಳೂರು:- ಬೇಸಿಗೆಯಲ್ಲಿ KMF ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ದಾಖಲೆ ಮಟ್ಟದಲ್ಲಿ ಮಾರಾಟ ಮಾಡಲಾಗುತ್ತಿದೆ.
ಬಿಸಿಲಿನ ತಾಪ ತಾಳಲಾರದೆ ಬೆಂಗಳೂರು ಮಂದಿ ತಂಪು ಪಾನಿಯಗಳತ್ತ ಮುಖ ಮಾಡುತ್ತಿದ್ದಾರೆ. ಹಣ್ಣಿನ ಜ್ಯೂಸ್ಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕೆಎಂಎಫ್ನ ನಂದಿನಿ ಮೊಸರು, ಮಜ್ಜಿಗೆ, ಐಸ್ ಕ್ರೀಮ್ಗಳಿಗೆ ಫುಲ್ ಡಿಮ್ಯಾಂಡ್ ಬಂದಿದೆ. ಒಂದೇ ದಿನ ಬೆಂಗಳೂರಿನಲ್ಲಿ 16 ಲಕ್ಷ ಲೀಟರ್ ಮೊಸರು ಮಾರಾಟವಾಗಿದ್ದು, ಕೆಎಂಎಫ್ ಇತಿಹಾಸದಲ್ಲೇ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ.
ಕೆಎಂಎಫ್ ಮೊದಲು ಪ್ರತಿದಿನ 42 ಲಕ್ಷ ಲೀಟರ್ ಹಾಲು ಮಾರಾಟ ಮಾಡುತ್ತಿತ್ತು. ಆದರೆ ಈ ವರ್ಷ 47 ಲಕ್ಷ ಲೀಟರ್ನಷ್ಟು ಹಾಲು ಮಾರಾಟವಾಗುತ್ತಿದೆ. ಇನ್ನು ಮೊಸರು ಮೊದಲು ಪ್ರತಿದಿನ 10 ಲಕ್ಷ ಲೀಟರ್ನಷ್ಟು ಮಾರಾಟವಾಗುತ್ತಿತ್ತು. ಆದರೆ ಈ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಕಳೆದ ಎರಡು ತಿಂಗಳಿನಿಂದ ನಂದಿನಿ ಮೊಸರಿಗೆ ಡಿಮ್ಯಾಂಡ್ ಜಾಸ್ತಿಯಾಗಿದ್ದು, ಏಪ್ರಿಲ್ 6ನೇ ತಾರೀಖಿನಂದು 13.56 ಲಕ್ಷ ಲೀಟರ್ ಮೊಸರು ಮಾರಾಟವಾಗಿದೆ. ಆದರೆ ರಾಮನವಮಿಯ ದಿನದಂದು ಈ ದಾಖಲೆ ಮುರಿದಿದ್ದು, ಒಟ್ಟು 16 ಲಕ್ಷ ಲೀಟರ್ದಷ್ಟು ಮೊಸರು ಮಾರಾಟವಾಗಿದೆ.
ಈ ಹಿಂದೆ ಮಜ್ಜಿಗೆ ಹಾಗೂ ಲಸ್ಸಿ ಪ್ರತಿದಿನ 1.10 ಲಕ್ಷ ಲೀಟರ್ ನಷ್ಟು ಮಾರಾಟ ಆಗುತ್ತಿತ್ತು. ಆದರೆ ಈ ವರ್ಷ ಒಂದೂವರೆ ಲಕ್ಷ ಲೀಟರ್ನಷ್ಟು ಮಾರಾಟವಾಗುತ್ತಿದೆ. ಇನ್ನು, ಐಸ್ ಕ್ರೀಮ್ ಶೇ 36 ರಷ್ಟು ಮಾರಾಟವಾಗುತ್ತಿದ್ದು, ಒಟ್ಟು 16 ಸಾವಿರ ಲೀಟರ್ ಮಾರಾಟ ಆಗಿತ್ತು. ಈ ವರ್ಷದ ಬೇಸಿಗೆಯಲ್ಲಿ ಒಟ್ಟು 25,439 ಲೀಟರ್ ಐಸ್ ಕ್ರೀಮ್ ಮಾರಾಟವಾಗಿದ್ದು, ಕೆಎಂಎಫ್ ಭರ್ಜರಿ ಲಾಭವನ್ನು ಪಡೆಯುತ್ತಿದೆ