ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಇಂದು ಹೊರಬೀಳತ್ತೆ. ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಮೂರು ಪಕ್ಷಗಳು ಅಲರ್ಟ್ ಆಗಿದ್ದು, ಸರ್ಕಾರ ರಚನೆಗೆ ಪ್ಲಾನ್ ನಡೆಸಿವೆ. ಈ ಹೊತ್ತಿನಲ್ಲೇ ಜೆಡಿಎಸ್ (JDS) ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು, ನಾವು ಮೈತ್ರಿಗೆ ಸಿದ್ಧ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಮತದಾನ ನಡೆದ ಬೆನ್ನಲ್ಲೇ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಸಿಂಗಾಪುರಕ್ಕೆ ಹಾರಿದರು. ವಿದೇಶದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಅಲ್ಲಿಂದಲೇ ರಾಜಕೀಯ ಲೆಕ್ಕಾಚಾರ ಶುರು ಮಾಡಿದ್ದಾರೆ. ಯಾರೊಂದಿಗಾದರೂ ಓಕೆ, ಮೈತ್ರಿಗೆ ಸಿದ್ಧ. ಆದರೆ ಕೆಲವು ಷರತ್ತುಗಳು ಇವೆ ಎಂದು ಆಪ್ತರ ಮೂಲಕ ಹೆಚ್ಡಿಕೆ ಖಡಕ್ ಸಂದೇಶ ಕೊಟ್ಟಿದ್ದಾರೆ.
ಯಾರೇ ಮೈತ್ರಿಗೆ ಬಂದರೂ, ನಮ್ಮ ಷರತ್ತಿಗೆ ಒಪ್ಪಿಗೆ ಕೊಟ್ಟರೆ ಮಾತ್ರ ದೋಸ್ತಿ. ನಮ್ಮ ಬೇಡಿಕೆ, ನಮ್ಮ ಷರತ್ತು ಒಪ್ಪಿದವರ ಜೊತೆ ಸರ್ಕಾರ ನಡೆಸುತ್ತೇವೆ. ಎರಡು ಬಾರಿಯಾದ ಅವಾಂತರ ಈ ಬಾರಿ ಆಗಬಾರದು. ದೋಸ್ತಿ ಮಾಡಿಕೊಳ್ಳುವ ಮುನ್ನವೇ ಷರತ್ತುಗಳಿಗೆ ಒಪ್ಪಿಕೊಂಡರೆ ನಾವು ಸಿದ್ಧ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಕುಮಾರಸ್ವಾಮಿ ಷರತ್ತುಗಳೇನು?
ಸಿಎಂ ಜೊತೆಗೆ ಪ್ರಮುಖ ಖಾತೆಗಳು ನಮಗೆ ನೀಡಬೇಕು. ಜಲಸಂಪನ್ಮೂಲ ಇಲಾಖೆ, ಇಂಧನ, ಲೋಕೋಪಯೋಗಿ ಇಲಾಖೆ ಸೇರಿದಂತೆ ಪ್ರಮುಖ ಖಾತೆಗಳು ಕೊಡಬೇಕು. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಹೈಕಮಾಂಡ್ಗಳು ಹಸ್ತಕ್ಷೇಪ ಮಾಡಬಾರದು. ದೋಸ್ತಿ ಸರ್ಕಾರದ ಮಧ್ಯೆ ಯಾವುದೇ ಸಮನ್ವಯ ಸಮಿತಿ ಇರಬಾರದು.
ಯಾವುದೇ ನಿರ್ಧಾರ ತೆಗೆದುಕೊಳ್ಳಲು ಯಾವುದೇ ನಿರ್ಬಂಧ ಹಾಕಬಾರದು. ಸರ್ಕಾರದ ಯಾವುದೇ ನಿರ್ಧಾರ ತೆಗೆದುಕೊಳ್ಳಲು ನನಗೆ ಸ್ವತಂತ್ರ ಕೊಡಬೇಕು. ಜೆಡಿಎಸ್ ಕೊಟ್ಟಿರುವ ಪ್ರಣಾಳಿಕೆಗೆ ಯಾವುದೇ ವಿರೋಧ ಮಾಡದೇ ಜಾರಿಗೆ ಒಪ್ಪಿಕೊಳ್ಳಬೇಕು. ಜೆಡಿಎಸ್ ಭದ್ರಕೋಟೆ ಹಳೆ ಮೈಸೂರು ಭಾಗದ ಜಿಲ್ಲೆಗಳ ಮೇಲೆ ಮೈತ್ರಿ ಪಕ್ಷ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂದು ಮೈತ್ರಿ ಬಯಸಿ ಬರುವ ಪಕ್ಷಕ್ಕೆ ಕುಮಾರಸ್ವಾಮಿ ಷರತ್ತು ಹಾಕಿದ್ದಾರೆ.
ಜೆಡಿಎಸ್ ಮೂಲಗಳ ಪ್ರಕಾರ, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ರಾಷ್ಟ್ರೀಯ ನಾಯಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡರು ಸಮ್ಮಿಶ್ರ ರಚನೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ಒಂದೆರೆಡು ಬಾರಿ ಜನಾದೇಶ ಮುರಿದು ಬೀಳಲಿದೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದಿದ್ದರು. 2022 ರ ಡಿಸೆಂಬರ್ನಲ್ಲಿ, 2023 ರ ಚುನಾವಣೆಯ ನಂತರ ಕೇಸರಿ ಪಕ್ಷವು ತನ್ನ ಬಳಿಗೆ ಹೋಗಬೇಕಾಗುತ್ತದೆ ಎಂದು ಕುಮಾರಸ್ವಾಮಿ ಬಿಜೆಪಿಗೆ ಎಚ್ಚರಿಕೆ ನೀಡಿದ್ದರು.
ನಂತರ, ಮಾರ್ಚ್ನಲ್ಲಿ, ಕುಮಾರಸ್ವಾಮಿ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಹೈಕಮಾಂಡ್ಗಳಿಂದ ಪ್ರಸ್ತಾವನೆಯನ್ನು ಸ್ವೀಕರಿಸಿದ್ದರಂತೆ. ಇದನ್ನು ದೇವೇಗೌಡರು ಸಹ ದೃಢಪಡಿಸಿದ್ದಾರೆ. ಕರ್ನಾಟಕವು 2018, 2008 ಮತ್ತು 2004 ರಲ್ಲಿ ಜನಾದೇಶ ಯಾವ ಪಕ್ಷಕ್ಕೂ ಬಹುಮತ ಇರಲಿಲ್ಲ, ಇದರ ಪರಿಣಾಮವಾಗಿ ಸಮ್ಮಿಶ್ರ ಸರ್ಕಾರಕ್ಕೆ ಕಾರಣವಾಯಿತು.