ಸಂಸತ್ನಲ್ಲಿ ಮಹಿಳೆಯರಿಗೆ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿರುವ ಸ್ಥಾನಗಳಲ್ಲಿ ಮಾಜಿ ಪ್ರಧಾನಿ ಇಮ್ರಾನ್ಖಾನ್ಗೆ ನಿಷ್ಟರಿರುವ ಸಂಸದರು ಪಾಲು ಪಡೆಯುವಂತಿಲ್ಲ ಎಂದು ಪಾಕಿಸ್ತಾನದ ಚುನಾವಣಾ ಆಯೋಗ ಸೂಚನೆ ನೀಡಿದೆ.
ಪಿಎಂಎಲ್-ಎನ್ ಮುಖಂಡ ಶೆಹಬಾಝ್ ಷರೀಫ್ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಚುನಾವಣಾ ಆಯೋಗ ಈ ನಿರ್ಧಾರ ಪ್ರಕಟಿಸಿದೆ.
336 ಸದಸ್ಯಬಲದ ಪಾಕಿಸ್ತಾನ ಸಂಸತ್ನಲ್ಲಿ 70 ಸ್ಥಾನಗಳನ್ನು ಮಹಿಳೆಯರಿಗೆ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಿರಿಸಲಾಗಿದೆ. ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಗೆದ್ದ ಸ್ಥಾನಗಳ ಅನುಪಾತದಲ್ಲಿ ಮೀಸಲು ಸ್ಥಾನ ದೊರಕಲಿದೆ. ಆದರೆ ಫೆಬ್ರವರಿ 8ರಂದು ಪಾಕಿಸ್ತಾನದಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷಕ್ಕೆ ಚಿಹ್ನೆ ನಿರಾಕರಿಸಿದ್ದರಿಂದ ಪಕ್ಷದ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸಿ ಇತರ ಪಕ್ಷಗಳಿಗಿಂತ ಹೆಚ್ಚಿನ (93 ಸ್ಥಾನ) ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಬಳಿಕ ಸುನ್ನಿ ಇತ್ತೆಹಾದ್ ಕೌನ್ಸಿಲ್(ಎಸ್ಐಸಿ) ಪಕ್ಷದ ಜತೆ ಗುರುತಿಸಿಕೊಂಡು ಮೀಸಲು ಸ್ಥಾನಕ್ಕೆ ಹಕ್ಕು ಮಂಡಿಸಿದ್ದರು.
`ಪಕ್ಷೇತರ ಅಭ್ಯರ್ಥಿಗಳು ರಾಜಕೀಯ ಪಕ್ಷದ ಜತೆ ಗುರುತಿಸಿಕೊಂಡ ಅಥವಾ ಸೇರ್ಪಡೆಗೊಂಡ ಮಾತ್ರಕ್ಕೆ ಮೀಸಲು ಸ್ಥಾನಗಳಲ್ಲಿ ತಮ್ಮ ಹಕ್ಕನ್ನು ಪ್ರತಿಪಾದಿಸುವಂತಿಲ್ಲ ‘ ಎಂದು ಪಾಕಿಸ್ತಾನದ ಚುನಾವಣಾ ಆಯೋಗ ಹೇಳಿದೆ. ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವುದಾಗಿ ಪಿಟಿಐ ಪಕ್ಷ ತಿಳಿಸಿದೆ.