ಬೆಂಗಳೂರು: ಎರಡುವರೆ ಸಾವಿರ ಕೋಟಿ ಅಕ್ರಮ ಹಾಗೂ 6 ಲಕ್ಷ ಠೇವಣಿದಾರರಿದ್ದ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಹಗರಣದ ಬಗ್ಗೆ ಎಸ್ಐಟಿ ರಚನೆ ಮಾಡುವಂತೆ ಪ್ರಿಯಾಂಕಾ ಗಾಂಧಿ ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ. ರಾಜ್ಯದಕ್ಕೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಹಾಗೂ ಸಂತ್ರಸ್ತರ ಪರವಾಗಿ ಹೋರಾಟ ಮಾಡುತ್ತಿರುವ ಹೋರಾಟಗಾರರ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದೆ.
6 ಲಕ್ಷ ಠೇವಣಿದಾರರಿದ್ದ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ 15,000 ಕ್ಕೂ ಹೆಚ್ಚು ಠೇವಣಿದಾರರಿಗೆ ಅನ್ಯಾಯವಾಗಿದೆ ಎಂಬ ಆರೋಪ ಇದೆ. ಸಂತ್ರಸ್ತರು ಹಲವು ಸಮಯಗಳಿಂದ ಹೋರಾಟ ಮಾಡ್ತಿದ್ದಾರೆ. ಹಗರಣದ ತನಿಖೆಯನ್ನು ಸಿಬಿಐ ತನಿಖೆಗೆ ನೀಡಲಾಗಿದೆ. ಆದರೆ ತನಿಖೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂಬುದು ಸಂತ್ರಸ್ತರ ಆರೋಪವಾಗಿದೆ.
ಈ ಹಿನ್ನೆಲೆಯಲ್ಲಿ ಸಂತ್ರಸ್ತರ ನಿಯೋಗ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ತಮ್ಮ ಪರವಾಗಿ ಧ್ವನಿ ಎತ್ತುವಂತೆ ಮನವಿ ಮಾಡಿದೆ. ಇದಕ್ಕೆ ಸ್ಪಂದಿಸಿದ ಪ್ರಿಯಾಂಕಾ ಗಾಂಧಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಎಸ್ ಐಟಿ ರಚನೆ ಮಾಡುವಂತೆ ಸಲಹೆ ಕೊಡುವುದಾಗಿ ತಿಳಿಸಿದ್ದಾರೆ.