ಮಂಡ್ಯ: ಜೆಡಿಎಸ್ (JDS) ನಲ್ಲಿ ಒಬ್ಬರನ್ನ ತೆಗೆಯಲು ಮತ್ತೊಬ್ಬರನ್ನ ಹುಟ್ಟು ಹಾಕ್ತಾರೆ ಎಂದು ಜೆಡಿಎಸ್ ವಿರುದ್ಧ ಸಚಿವ ನಾರಾಯಣಗೌಡ (Narayana Gowda) ಗಂಭೀರ ಆರೋಪ ಮಾಡಿದ್ದಾರೆ.
ಮಂಡ್ಯ ಕೆ.ಆರ್.ಪೇಟೆ (K R Pete) ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣರವರಿಗೆ ಟಿಕೆಟ್ ತಪ್ಪಿಸಿ ನನಗೆ ಟಿಕೆಟ್ ಕೊಟ್ರು. ನಾನು ಅಂದು ಪಾರ್ಟಿಗೆ ಕಡಿದು ಹಾಕಿರಲಿಲ್ಲ. ಕೃಷ್ಣರವರು ಪಕ್ಷಕ್ಕಾಗಿ 40 ವರ್ಷ ಸೇವೆ ಮಾಡಿದ್ರು. ಸ್ಪೀಕರ್ ಕೃಷ್ಣ (Speaker Krishna) ರನ್ನ ಮುಗಿಸಲು ನನ್ನ ಹುಟ್ಟು ಹಾಕಿದ್ರು. ನನ್ನ ಮುಗಿಸಲು ಇನ್ನೊಬ್ಬನನ್ನ ಹುಟ್ಟುಹಾಕಿದ್ರು. ಇನ್ನೊಬ್ಬರ ತೆಗೆಯಲು ಮತ್ತೊಬ್ಬರ ಹುಟ್ಟುಹಾಕ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಆ ಪಕ್ಷದಲ್ಲಿದ್ದೆ, ಅವರ ಮನೆ ಅನ್ನ ತಿಂದಿದ್ದೀನಿ, ನಾನು ಟೀಕೆ ಮಾಡಲ್ಲ. ನೋವನ್ನ ಹೇಳ್ತಿಕೊಳ್ತೇನೆ ಅಷ್ಟೇ. ಯಾರನ್ನ ಬೆಳೆಯಲು ದೇವೇಗೌಡರ ಕುಟುಂಬ ಬಿಟ್ಟಿದ್ದಾರೆ ಹೇಳಿ?. ಮೇಲುಕೋಟೆ ಶಾಸಕ ಪುಟ್ಟರಾಜುರವರ ಅಂತರಾಳ ಕೇಳಿ ಅದರ ಬಗ್ಗೆ ಹೇಳ್ತಾರೆ. ಪುಟ್ಟರಾಜು ಬಾಯಲ್ಲಿ ಹೇಳಲ್ಲ, ಮಿಷನ್ ಹಾಕ್ಬೇಕು. 99% ನಾಯಕರು ಭಯದ ವಾತಾವರಣದಲ್ಲಿ ಜೆಡಿಎಸ್ ನಲ್ಲಿದ್ದಾರೆ. ಆತ್ಮಪೂರ್ವಕವಾಗಿ ಯಾರು ಜೆಡಿಎಸ್ (JDS) ನಲ್ಲಿ ಇಲ್ಲ ಎಂದರು.
ಬಹುತೇಕ ಸಮೀಕ್ಷೆಗಳಲ್ಲಿ ಈ ಬಾರಿ ಅತಂತ್ರ ಪರಿಸ್ಥಿತಿ ವಿಚಾರದ ಕುರಿತು ಪ್ರತಿಕ್ರಿಯಿಸಿ, ಬಿಜೆಪಿಗೆ ಹಿನ್ನೆಡೆ ಅಂತಾ ಹೇಳ್ತಿರೋದು ಜೆಡಿಎಸ್. ಜೆಡಿಎಸ್ ನವರು ಕಡಿದು ಎತ್ತಾಕ್ಕಾಬ್ಬಿಟ್ಟಿದ್ದಾರೆ. ಚುನಾವಣೆ ಬಂದಾಗ ಈ ರೀತಿ ಹೇಳ್ತಾರೆ ಅಷ್ಟೇ. ಕ್ಷೇತ್ರದ ಅಭಿವೃದ್ದಿಗೆ ಮೈತ್ರಿ ಸರ್ಕಾರದಲ್ಲಿ ಅನುದಾನ ಕೊಟ್ಟಿದ್ರೆ ನಾನ್ಯಾಕೆ ಬಿಜೆಪಿಗೆ ಹೋಗ್ತಿದ್ದೆ. ನಾರಾಯಣಗೌಡ ಅವಾಗ್ ಪಕ್ಷ ಬಿಟ್ಟೋದೆ. ಇವಾಗ್ ಯಾಕೆ ಒಂದು ಡಜನ್ ಬಿಟ್ಟು ಹೋಗ್ತಾವ್ರೆ ಎಂದರು.
ನಾರಾಯಣಗೌಡ ಜೊತೆಗೆ ಗೋಪಾಲಯ್ಯ, ವಿಶ್ವನಾಥ್ ಸಾಹೇಬ್ರು ಜೆಡಿಎಸ್ ಬಿಟ್ರು. ಈಗ ರಾಮಸ್ವಾಮಿ, ಶಿವಲಿಂಗೇಗೌಡ, ವೈ.ಎಸ್.ವಿ ದತ್ತ, ಗುಬ್ಬಿ ಶ್ರೀನಿವಾಸ್ ಬಿಟ್ಟೋದ್ರು. ಅವರಿಗೆ ಅವರ ಕುಟುಂಬ ಬಿಟ್ಟು ಯಾರು ಬೆಳೆಯಬಾರದು. ಕೆ.ಆರ್.ಪೇಟೆಗೆ ಜೆಡಿಎಸ್ ನವರ ಕೊಡುಗೆ ಏನು?. ಕೆ.ಆರ್.ಪೇಟೆ ಬಿ.ಎಲ್.ದೇವರಾಜು 40 ವರ್ಷ ಪೋಸ್ಟರ್ ಅಂಟಿಸಿ ಕೊಂಡು ಬಂದ್ರು. ಅಂತಹ ಒಳ್ಳೆಯ ವ್ಯಕ್ತಿ ದೇವರಾಜ್ ಗೆ ತೆಂಗಿನಕಾಯಿ ಕಂಟ ಕೊಟ್ಟು ಕಳುಹಿಸಿದ್ರು. ಜೆಡಿಎಸ್ ನಾಯಕರ ವಿರುದ್ದ ಸಚಿವ ನಾರಾಯಣಗೌಡ ವಾಗ್ದಾಳಿ ನಡೆಸಿದರು.
ಅಮಿತ್ ಶಾ-ಸಚಿವ ನಾರಾಯಣಗೌಡ ಭೇಟಿ ವಿಚಾರದ ಕುರಿತು ಪ್ರತಿಕ್ರಿಯಿಸಿ, ಮಂಡ್ಯ ಜಿಲ್ಲೆಯನ್ನ ಉತ್ತಮ ಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು. ಬಿಜೆಪಿ ಪಕ್ಷದಲ್ಲಿ ಹೆಚ್ಚಿನ ಜವಬ್ದಾರಿ ತೆಗೆದುಕೊಳ್ಳಬೇಕು ಎಂದು ಶಾ ಹೇಳಿದ್ದಾರೆ. ಯಡಿಯೂರಪ್ಪ ನನ್ನ ತಂದೆ ಸಮಾನ. ನಮ್ಮ ಮೇಲೆ ಅವರು ಬಹಳ ಪ್ರೀತಿ ಇಟ್ಟುಕೊಂಡಿದ್ದಾರೆ. ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಕೆ.ಆರ್.ಪೇಟೆ ಕ್ಷೇತ್ರದ ಪ್ರಚಾರಕ್ಕೆ ವಿಜಯೇಂದ್ರ, ಯಡಿಯೂರಪ್ಪ ಬರ್ತಾರೆ. ಕರ್ನಾಟಕವನ್ನೇ ಸುತ್ತುತ್ತಾರೆ, ಕೆ.ಆರ್.ಪೇಟೆ ಬಿಡ್ತಾರಾ ಎಂದು ಪ್ರಶ್ನಿಸಿದ ಅವರು, ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವವರೆಗು ಯಡಿಯೂರಪ್ಪನವರು ಸುಮ್ಮನೆ ಕೂರಲ್ಲ. ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಎಂದು ಕೊಂಡ್ರೆ ಅದು ತಪ್ಪು ಎಂದರು.
ಅಭಿವೃಧ್ಧಿ ಆಗಲಿಲ್ಲ ಎಂಬ ಜೆಡಿಎಸ್ ಕಾಂಗ್ರೆಸ್ ಟೀಕೆ ವಿಚಾರದ ಬಗ್ಗೆ ಮಾತನಾಡಿ, ನಾನು ಜಲ್ಲಿ ಹೊಡೀತಿಲ್ಲ, ಕಲ್ಲು ಹೊಡೆಯುತ್ತಿಲ್ಲ. ನಾವು ಮಾಡಿಸಿದ ರಸ್ತೆಗಳನ್ನ ಕಿತ್ತಾಕೊಂಡು ಬರ್ತಿದ್ದಾರೆ. ನಾನು ಅದನ್ನ ಹೇಳಿಕೊಂಡು ನಾನು ಬರಬೇಕಾ.? ಇನ್ಮೇಲೆ ಶುರುವಾಗುತ್ತೆ ಎಂದು ಚಿಟುಕೆ ಹೊಡೆದು ಜೆಡಿಎಸ್ ಅಭ್ಯರ್ಥಿ ಹೆಚ್.ಟಿ.ಮಂಜು ವಿರುದ್ದ ನಾರಾಯಣಗೌಡ ಗುಡುಗು. ಬಾಂಬೆ ಸುಳ್ಳ, ಬಾಂಬೆ ಕಳ್ಳ ಅಂತಾರೆ. ನಾನು ನಯಾಪೈಸೆ ಕಳ್ಳತನ ಮಾಡಿದ್ರೆ ಒಂದೆ ಒಂದು ದಾಖಲೆ ಕೊಡಲಿ. ಇವರ ಮನೆಗೆ ನುಗ್ಗಿ ಏನಾದ್ರು ಮಾಡಿದ್ರೆ ಹೇಳಲಿ ಎಂದರು.