ಹಾಸನ: ಟಿಕೆಟ್ ವಿಚಾರದಲ್ಲಿ ನಮ್ಮ ಸರ್ವೋಚ್ಛ ನಾಯಕರಾದ ಹೆಚ್.ಡಿ. ದೇವೇಗೌಡರ (HD Deve Gowda) ನಿರ್ಧಾರವೇ ಅಂತಿಮ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna) ಹೇಳಿದರು.
ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಆನೆಕೆರೆಯಮ್ಮ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಕುಟುಂಬ ಸಮೇತವಾಗಿ ಆನೆಕೆರೆಯಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ದೇವೇಗೌಡರಿಗೆ 60 ವರ್ಷದ ರಾಜಕೀಯ ಅನುಭವ ಇದೆ. ಅವರ ನಿರ್ಧಾರವೇ ಅಂತಿಮ. ನಾನು ಹಿಂದಿನಿಂದಲೂ ಯಾವುದೇ ಕ್ಷೇತ್ರದ ಟಿಕೆಟ್ ಕೇಳಿಲ್ಲ. ದೇವೇಗೌಡರೇ ಎಲ್ಲಾ ಕ್ಷೇತ್ರಗಳ ಟಿಕೆಟ್ ನಿರ್ಧಾರ ಮಾಡುತ್ತಿದ್ದಾರೆ. ಹಿಂದೆಯೂ ಅವರ ಮಾತು ಕೇಳಿದ್ದೇನೆ, ಈಗಲೂ ಕೇಳುತ್ತೇನೆ, ಮುಂದೆಯೂ ಕೇಳುತ್ತೇನೆ ಎಂದರು.
ಸಾಮಾನ್ಯ ಕಾರ್ಯಕರ್ತನಿಗೆ ಹಾಸನ ಟಿಕೆಟ್ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿಕೆಗೆ ಟಾಂಗ್ ನೀಡಿದ ಅವರು, ಸಾಮಾನ್ಯ ಕಾರ್ಯಕರ್ತ ಅಂದರೆ ಯಾರು, ಪಕ್ಷದಿಂದ ಏನೂ ಫಲಾನುಭವ ಪಡೆಯದವನು, ಸಾಮಾನ್ಯ ಕಾರ್ಯಕರ್ತ ಎನ್ನುವ ಮೂಲಕ ಪರೋಕ್ಷವಾಗಿ ಸ್ವರೂಪ್ ಸಾಮಾನ್ಯ ಕಾರ್ಯಕರ್ತ ಅಲ್ಲ ಎಂಬ ಅಸಮಾಧಾನ ಹೊರಹಾಕಿದರು. ಹಾಸನದಲ್ಲಿ ಕೆಲ ಶಕುನಿಗಳು ನಮ್ಮ ಕುಟುಂಬ ಮುಗಿಸಲು ಹೊರಟಿದ್ದಾರೆ ಎಂಬ ಹೆಚ್ಡಿಕೆ ಹೇಳಿಕೆಗೆ ನಾನು ಅದಕ್ಕೆ ರಿಯಾಕ್ಟ್ ಮಾಡಲ್ಲ, ಅದೇನು ನನಗೆ ಗೊತ್ತಿಲ್ಲಪ್ಪ ಎಂದು ಹೇಳಿದರು.
ದೇವೇಗೌಡರಿಗೆ ಈ ಜಿಲ್ಲೆಯದ್ದು ಎಲ್ಲಾ ಗೊತ್ತಿದೆ. ದೇವೇಗೌಡರು ಏನು ಹೇಳುತ್ತಾರೆಯೋ ನಾವು ಅದನ್ನು ಕೇಳುತ್ತೇವೆ. ಜಿಲ್ಲೆಯಲ್ಲಿ 7 ಕ್ಷೇತ್ರ ಗೆಲ್ಲಬೇಕು, ನಮ್ಮ ಜನ ಉಳಿಯಬೇಕು, ಕುಮಾರಸ್ವಾಮಿ ಅವರು ಸಿಎಂ ಆಗಬೇಕು ಎನ್ನೊದಷ್ಟೇ ನಮ್ಮ ಉದ್ದೇಶವಾಗಿದೆ. ಸಾಮಾನ್ಯ ಕಾರ್ಯಕರ್ತ ಯಾರು ಅಂತ ದೇವೇಗೌಡರು ಕಳೆದ ಜನವರಿಯಲ್ಲೇ ತೀರ್ಮಾನ ಮಾಡಿದ್ದಾರೆ. ದೇವೇಗೌಡರ ಮಾತು ಮೀರಿ ನಾನು ಹೋಗಲ್ಲ, ಹಿಂದೆನೂ ಹೋಗಿಲ್ಲ, ಮುಂದೆಯೂ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.