ಬೆಂಗಳೂರು:- ಗ್ಯಾರಂಟಿಗಳಿಂದ ಅಭಿವೃದ್ಧಿ ಕಾರ್ಯ ಸಂಪೂರ್ಣ ಕುಂಠಿತವಾಗಿದೆ ಎಂದು ಮಾಜಿ ಸಚಿವ ಆರ್ ಅಶೋಕ್ ಕಿಡಿಕಾರಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಗುತ್ತಿಗೆದಾರರಿಂದ ಕಮಿಷನ್ ವಸೂಲಿಯಾದ ನಂತರ ಸಿಐಡಿ, ಎಸ್ಐಟಿ ಎಲ್ಲ ತನಿಖೆಯನ್ನೂ ಕಾಂಗ್ರೆಸ್ ಸರ್ಕಾರ ಮರೆತಿದೆ. ಬೆದರು ಬೊಂಬೆಯಂತೆ ತನಿಖಾ ಆಯೋಗವನ್ನು ಬಳಸಿಕೊಳ್ಳಲಾಗುತ್ತಿದೆ, ಇನ್ನೊಂದೆಡೆ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ ಎಂದರು.
ಹಳೇ ಬಿಲ್ ಬಾಕಿ ಕೊಡಲು ಈ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ…, ಸತ್ಯಹರಿಶ್ಚಂದ್ರರ ಮೊಮ್ಮಕ್ಕಳಂತೆ ತನಿಖೆ ಮಾಡುತ್ತೇವೆ ಎಂದರು. ಹಾಗಾದರೆ, ಎಲ್ಲಿ ನಡೆಯಿತು ತನಿಖೆ? ತನಿಖೆ ಮಾಡಿ ಎಷ್ಟು ಜನರನ್ನು ಹಿಡಿದು ಹಾಕಿದ್ದಾರೆ? ಎಷ್ಟು ಜನರನ್ನು ಕಪುಪಪಟ್ಟಿಗೆ ಸೇರಿಸ ಲಾಯಿತು? ಕಮಿಷನ್ ರೇಟ್ ಫಿಕ್ಸ್ ಮಾಡುವ ಸಲುವಾಗಿ ತನಿಖೆಯ ಬೆದರುಬೊಂಬೆ ತೋರಿಸಿದರು. ಸರಾಗವಾಗಿ ಕಮಿಷನ್ ಬರಲು ಆರಂಭವಾದ ಮೇಲೆ ಎಸ್ಐಟಿ, ಸಿಐಡಿ… ಯಾವ ತನಿಖೆಯೂ ನಡೆಯುತ್ತಿಲ್ಲ ಎಂದು ಹರಿಹಾಯ್ದರು.
ಸರ್ಕಾರದ ಬಳಿ ದುಡ್ಡಿಲ್ಲ. ಬಂದಿರುವ ಗ್ಯಾರಂಟಿ ಜನರಿಗೆ ತಲುಪಿದ ಖುಷಿ ಎಲ್ಲೂ ಕಾಣಿಸುತ್ತಿಲ್ಲ. ರಾಜಕೀಯ ಅಧಿಕಾರಕ್ಕಾಗಿ ರಾಜ್ಯ ಹಾಳಾದರೂ ಪರವಾಗಿಲ್ಲ, ಚುನಾವಣೆ ಗೆಲ್ಲಬೇಕು ಎಂಬ ಮನಸ್ಥಿತಿ ಈ ಹಿಂದಿನ ಯಾವ ಮುಖ್ಯಮಂತ್ರಿಯಲ್ಲೂ ಕಾಣಲಿಲ್ಲ. ರಾಜ್ಯಕ್ಕೆ ಅನ್ಯಾಯ ಮಾಡುವಂತಹ ಸರ್ಕಾರವನ್ನು ಈ ಜನ ಕಂಡಿಲ್ಲ ಎಂದು ಹೇಳಿದ್ದಾರೆ.