ಅಮೆರಿಕದ ಸೇಂಟ್ ಲೂಯಿಸ್ನಲ್ಲಿ ಸ್ನೇಹಿತನನ್ನು ಹತ್ಯೆ ಮಾಡಲಾಗಿದೆ ಎಂದಿರುವ ಕಿರುತೆರೆ ನಟಿ ದೇವೋಲೀನಾ ಭಟ್ಟಾಚಾರ್ಯ, ಕೇಂದ್ರ ಸರ್ಕಾರದ ನೆರವು ಕೋರಿದ್ದಾರೆ.
ಸಂಶೋಧನಾ ವಿದ್ಯಾರ್ಥಿಯಾಗಿದ್ದ ತಮ್ಮ ಸ್ನೇಹಿತ ಅಮರನಾಥ್ ಘೋಷ್ ಅವರನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಎಕ್ಸ್/ಟ್ವಿಟರ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ, ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಮನವಿ ಮಾಡಿದ್ದಾರೆ.
‘ನನ್ನ ಸ್ನೇಹಿತ ಅಮರನಾಥ್ ಘೋಷ್ ಅವರನ್ನು ಸೇಂಟ್ ಲೂಯಿಸ್ ಅಕಾಡೆಮಿ ಬಳಿ ಮಂಗಳವಾರ ಸಂಜೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ ಘೋಷ್ ಮೂರು ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದಾರೆ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.
‘ಆರೋಪಿಯ ವಿವರಗಳು ಬಹಿರಂಗವಾಗಿಲ್ಲ. ಸ್ನೇಹಿತರನ್ನು ಬಿಟ್ಟರೆ, ಹೋರಾಟ ನಡೆಸಲು ಘೋಷ್ ಕುಟುಂಬದ ಯಾರೊಬ್ಬರೂ ಇಲ್ಲ. ಒಳ್ಳೆಯ ನೃತ್ಯಗಾರ, ಪಿಎಚ್ಡಿ ವ್ಯಾಸಂಗ ಮಾಡುತ್ತಿದ್ದ ಘೋಷ್ ಕೋಲ್ಕತ್ತದವನು. ಸಂಜೆ ವಿಹರಿಸುತ್ತಿದ್ದ ವೇಳೆ, ಅಪರಿಚಿತನೊಬ್ಬ ಇದ್ದಕ್ಕಿದ್ದಂತೆ ಹಲವು ಬಾರಿ ಗುಂಡು ಹಾರಿಸಿದ್ದಾನೆ’ ಎಂದು ತಿಳಿಸಿದ್ದಾರೆ.
‘ಅಮೆರಿಕದಲ್ಲಿರುವ ಕೆಲವು ಸ್ನೇಹಿತರು ಶವ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ’ ಎಂದಿರುವ ಭಟ್ಟಾಚಾರ್ಯ, ಸಾಧ್ಯವಾದರೆ ಈ ಬಗ್ಗೆ ಗಮನಹರಿಸಿ ಎಂದು ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಮನವಿ ಮಾಡಿದ್ದಾರೆ.
ತಮ್ಮ ಪೋಸ್ಟ್ ಜೊತೆಗೆ ನರೇಂದ್ರ ಮೋದಿ ಹಾಗೂ ಜೈಶಂಕರ್ ಅವರನ್ನು ಟ್ಯಾಗ್ ಮಾಡಿರುವ ನಟಿ, ಹತ್ಯೆಗೆ ಕಾರಣವೇನು ಎಂಬುದಾದರೂ ಗೊತ್ತಾಗಬೇಕು ಎಂದು ಒತ್ತಾಯಿಸಿದ್ದಾರೆ.