ಡಾಲಿ ಧನಂಜಯ್ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಡಾಲಿ ಧನಂಜಯ್ ಅವರ ಕೈ ಹಿಡಿಯೋ ಹುಡುಗಿ ಯಾರು ಎಂಬ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಅವರ ಬಾಳ ಸಂಗಾತಿ ಯಾರು ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದೆ. ತಮ್ಮ ಬಾಳ ಸಂಗಾತಿಯನ್ನು ಧನಂಜಯ್ ಅವರು ಪರಿಚಯಿಸಿದ್ದಾರೆ. ಫೆಬ್ರವರಿ 16ರಂದು ಧನಂಜಯ್ ಮದುವೆ ನಡೆಯಲಿದೆ.
ಧನಂಜಯ್ ಅವರ ಮದುವೆ ವಿಚಾರಕ್ಕೆ ಸಂಬಂಧಿಸಿ ಪ್ರಶ್ನೆಗಳು ಎದುರಾಗುತ್ತಿದ್ದವು. ಮದುವೆ ಯಾವಾಗ ಎಂದು ಅವರನ್ನು ಕೇಳಲಾಗುತ್ತಿತ್ತು. ಇದೀಗ ಆ ಪ್ರಶ್ನೆಗೆ ಡಾಲಿ ಧನಂಜಯ ಕಡೆಯಿಂದ ಉತ್ತರ ಸಿಕ್ಕಿದೆ. ಭಾವಿ ಪತ್ನಿ ಜೊತೆಗಿನ ಸುಂದರವಾದ ವಿಡೀಯೋನ ಹಂಚಿಕೊಂಡಿದ್ದು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಡಾಲಿ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಧನ್ಯತಾ. ಸ್ತ್ರೀರೋಗ ತಜ್ಞೆ ಆಗಿರುವ ಧನ್ಯತಾ, ಧನಂಜಯ್ಗೆ ಜೊತೆಯಾಗುತ್ತಿದ್ದಾರೆ. ಡಾಲಿ ಮತ್ತು ಧನ್ಯತಾ ಮಧ್ಯೆ ಅನೇಕ ವರ್ಷಗಳ ಪರಿಚಯ ಇದ್ದು, ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ಹಸೆಮಣೆ ಏರುತ್ತಿದ್ದಾರೆ.
ಧನ್ಯತಾ ಚಿತ್ರದುರ್ಗ ಮೂಲದವರಾಗಿದ್ದು ಅಪ್ಪಟ ಕನ್ನಡತಿ. ಇವರು ಓದಿದ್ದು ಮೈಸೂರಿನಲ್ಲಿ. ಸದ್ಯ ಶೇರ್ ಮಾಡಿರುವ ವಿಡಿಯೋದಲ್ಲಿ ಧನಂಜಯ್ ಅವರು ಭಾವಿ ಪತ್ನಿಗೆ ಸುಂದರ ಸಾಲುಗಳನ್ನು ಕೂಡ ಬರೆದಿದ್ದಾರೆ. ಇಬ್ಬರ ಮುದ್ದಾದ ವಿಡಿಯೋಗೆ ಅಭಿಮಾನಿಗಳಿಂದ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.
ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ನಲ್ಲಿ ಡಾಲಿ ಮತ್ತು ಧನ್ಯತಾ ವಿವಾಹ ನೆರವೇರಲಿದೆ. ಅದ್ದೂರಿಯಾಗಿ ನಡೆಯುವ ಮದುವೆ ಸಮಾರಂಭದಲ್ಲಿ ಸಿನಿಮಾರಂಗದವರು, ರಾಜಕೀಯ ಕ್ಷೇತ್ರದವರು ಸೇರಿ ಅನೇಕ ಗಣ್ಯರು ಹಾಜರಾಗಲಿದ್ದಾರೆ. ಬೆಳಿಗ್ಗೆ ವಿವಾಹ ನಡೆಯಲಿದ್ದು, ಅದೇ ದಿನ ಅದೇ ವೇದಿಕೆ ಮೇಲೆ ಆರತಕ್ಷತೆ ಸಮಾರಂಭ ಕೂಡ ಜರುಗಲಿದೆ. ಧನಂಜಯ್ ಮತ್ತು ಧನ್ಯತಾ ಇಬ್ಬರಿಗೂ ಮೈಸೂರು ಎಮೋಷನಲಿ ಕನೆಕ್ಟ್ ಆದ ಸ್ಥಳ. ಹೀಗಾಗಿ ಅಲ್ಲಿಯೇ ಹಸೆಮಣೆ ಏರಲು ನಿರ್ಧರಿಸಿದ್ದಾರೆ.