ಚಿಕ್ಕಮಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಕಾಫಿನಾಡಲ್ಲಿ ಮತ್ತೆ ಧರ್ಮ ದಂಗಲ್ ಮುನ್ನೆಲೆಗೆ ಬಂದಿದೆ. ಶೃಂಗೇರಿ ತಾಲೂಕಿನ ಕಿಗ್ಗಾ ಋಷ್ಯಶೃಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಅನ್ಯ ಕೋಮಿನ ವ್ಯಾಪಾರಸ್ಥರಿಗೆ ನಿರ್ಬಂಧ ಹೇರುವಂತೆ ಹಿಂದೂ ಸಂಘಟನೆಗಳು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿವೆ.
ಮಾರ್ಚ್ 19ರಂದು ಮಳೆ ದೇವರು ಎಂದೇ ಖ್ಯಾತಿಯಾಗಿರುವ ಕಿಗ್ಗಾ ಋಷ್ಯಶೃಂಗೇಶ್ವರ ದೇವಾಲಯದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ. ಅನ್ಯ ಕೋಮಿನವರು ಹೈಕೋರ್ಟ್ ಆದೇಶದ ಬಳಿಕವೂ ರಾಜ್ಯದಲ್ಲಿ ಬಂದ್ ಮಾಡಿ ಈ ಮಣ್ಣಿನ ಕಾನೂನಿಗೆ ಬೆಲೆ ಇಲ್ಲದಂತೆ ಮಾಡಿದ ಹಿನ್ನೆಲೆಯಲ್ಲಿ ಅನುಮತಿ ನೀಡಬಾರದು ಎಂದು ಮನವಿ ಮಾಡಿದೆ.
ಹಿಂದೂಗಳ ಜಾತ್ರೆ-ಸಭೆ, ಸಮಾರಂಭದಲ್ಲಿನ ವ್ಯಾಪಾರದಲ್ಲಿ ಬಂದ ಲಾಭವನ್ನು ದೇಶವಿರೋಧಿ ಚಟುವಟಿಕೆ ಬಳಸುತ್ತಾರೆಂಬ ಸಂದೇಹವಿದೆ. ಜೊತೆಗೆ ದೇವಾಲಯ ಹಾಗೂ ಹಳ್ಳಿಯ ಸೂಕ್ಷ್ಮ ವಿಚಾರಗನ್ನು ಗಮನಿಸುತ್ತಾರೆ. ಹಾಗಾಗಿ ನಮ್ಮ ಜಾತ್ರೆಗೆ ಅವರು ವ್ಯಾಪಾರಕ್ಕೆ ಬರುವುದು ಬೇಡವೆಂದು ನಿರ್ಬಂಧಿಸುವಂತೆ ʼಜಾಗೃತ ಹಿಂದೂ ಬಾಂಧವರʼ ಹೆಸರಿನಲ್ಲಿ ತಹಶೀಲ್ದಾರ್ಗೆ ಮನವಿ ಮಾಡಲಾಗಿದೆ.
ಋಷ್ಯಶೃಂಗೇಶ್ವರ ಮಳೆ ದೇವರು ಎಂದೇ ಖ್ಯಾತಿಯಾಗಿದ್ದು, ರಾಜ್ಯಕ್ಕೆ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಂದರ್ಭದಲ್ಲಿ ಸರ್ಕಾರವೇ ಇಲ್ಲಿ ಪೂಜೆ ಮಾಡಿಸುತ್ತದೆ. ಯಾವುದೇ ಸರ್ಕಾರ ಅಧಿಕಾರಲ್ಲಿದ್ದರೂ ಬಹುತೇಕ ಎಲ್ಲಾ ಸಚಿವರು ಇಲ್ಲಿಗೆ ಆಗಮಿಸಿ ಪೂಜೆ ಮಾಡುವುದು ವಿಶೇಷ.